ಬೆಂಗಳೂರು: ದಶಕಗಳ ಹಿಂದೆ ಸರಕಾರದಿಂದ ಭೂಮಿ ಮಂಜೂರಾಗಿದ್ದರೂ ಪಕ್ಕಾ ದಾಖಲೆಗಳಲ್ಲಿದೆ ಪರದಾಡುತ್ತಿರುವ ರಾಜ್ಯದ ರೈತರಿಗೆ ವರ್ಷಾಂತ್ಯದ ಒಳಗೆ ಪೋಡಿ ದುರಸ್ತಿ ಮಾಡಿಕೊಡಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿ ಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾತನಾಡಿದ ಅವರು,ಕಳೆದ ಜನವರಿಯಿಂದಲೇ ರಾಜ್ಯಾದ್ಯಂತ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪ್ರತಿ ತಿಂಗಳು 5 ಸಾವಿರ ಪ್ರಕರಣಗಳ ಸರ್ವೇ
ಇದುವರೆಗೆ 30,476 ಪ್ರಕರಣಗಳಲ್ಲಿ ಭೂಮಾಪನ ಇಲಾಖೆಯಿಂದ ಅಳತೆ ಕೆಲಸವನ್ನು ಕೈಗೆತ್ತಿಕೊಂಡಿದ್ದು, ವರ್ಷಾಂತ್ಯದ ಒಳಗೆ ಎಲ್ಲ ಪ್ರಕರಣಗಳ ಪೋಡಿ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು. ಕಳೆದ ಸರಕಾರದ ಅವಧಿಯಲ್ಲಿ 5 ವರ್ಷದಲ್ಲಿ ಕೇವಲ 5,800 ಜನರಿಗೆ ಮಾತ್ರ ಪೋಡಿ ದುರಸ್ತಿ ಮಾಡಿಕೊಡಲಾಗಿತ್ತು.
ನಮ್ಮ ಸರಕಾರ ಕಳೆದ ಜನವರಿಯಿಂದ ಈವರೆಗೆ 88,886 ಮಂಜೂರುದಾರರ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಈ ಪೈಕಿ 30,476 ಪ್ರಕರಣಗಳಲ್ಲಿ ಸರ್ವೇ ಇಲಾಖೆಯಿಂದ ಅಳತೆ ಕೆಲಸವನ್ನೂ ಕೈಗೆತ್ತಿಕೊಂಡಿದ್ದೇವೆ. ಪ್ರತಿ ತಿಂಗಳು 5 ಸಾವಿರ ಪ್ರಕರಣಗಳ ಸರ್ವೇ ಕೆಲಸ ಮಾಡಬೇಕು ಎಂಬ ಗುರಿ ನೀಡಲಾಗಿದೆ ಎಂದರು.