ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದ್ದು, ಇಂದು (ಮಾ.13) ಕೂಡ ಮುಂದುವರಿಯಲಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಮುಂದಿನ 24 ಗಂಟೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಯಿಂದ 2 ದಿನದಿಂದ ಕರಾವಳಿ ಹಾಗೂ ಮಲೆನಾಡು ಸೇರಿ ರಾಜ್ಯದ ಇತರೆ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ಉಷ್ಣಾಂಶ ಏರಿಳಿತದಿಂದ ತಾಪಮಾನ ಹೆಚ್ಚಳ, ಜತೆಗೆ ಈ ತಿಂಗಳ ವರೆಗೆ ಅಗಾಗ್ಗೆ ಮಳೆಯಾಗಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.



