ಬೆಂಗಳೂರು: ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಎರಡು ಕಡೆಯಿಂದಲೂ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ರಾಜ್ಯದಲ್ಲಿ ಫೆ.22 ವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ,ಉಡುಪಿ,ಉತ್ತರ ಕನ್ನಡ, ಬೆಳಗಾವಿ, ಬೀದರ್,ಧಾರವಾಡ, ಹಾವೇರಿ,ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಫೆಬ್ರವರಿ 21ರವೆರೆಗೆ ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ನಿಯಂತ್ರಣ ಸಂಸ್ಥೆ ತಿಳಿಸಿದೆ.
ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಕೊಡಗು, ಮೈಸೂರು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರದಂದು ಮಳೆಯಾಗಿದ್ದು, ಶುಕ್ರವಾರವೂ ತಂಪಾದ ವಾತಾವರಣ, ಮಳೆಯಾಗುತ್ತಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಅಕಾಲಿಕ ಮಳೆಯಿಂದ ಹಿಂಗಾರು ಫಸಲಿಗೆ ಹಾನಿಯಾಗಿದೆ. ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಮಂಡ್ಯದಲ್ಲಿ ಗುರುವಾರದಂದು ಆಲಿಕಲ್ಲು ಮಳೆಯಾಗಿದೆ. ಫೆ.22 ತನಕ ಕರ್ನಾಟಕದ ಹಲವೆಡೆ ಮಳೆ ಆಗಲಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ನಿಡಗಲ್ ಗ್ರಾಮದಲ್ಲಿ ಗುರುವಾರ ಸಂಜೆ ಯುವಕನೊಬ್ಬ ಸಿಡಿಲಿನ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದಾನೆ. ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮಕ್ಕೆ ಇಟ್ಟಿಗೆ ನಿರ್ಮಾಣ ಕಾರ್ಯಕ್ಕಾಗಿ ಬಂದಿದ್ದ 20 ವರ್ಷ ವಯಸ್ಸಿನ ಪಾಂಡುರಂಗ ನಾರ್ವೇಕರ್ ಎಂಬಾತ ಕೂಡಾ ಸಿಡಿಲಿಗೆ ಬಲಿಯಾಗಿರುವ ವರದಿ ಬಂದಿದೆ.
ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶ 12 ರಿಂದ 15 ಡಿಗ್ರಿ ಸೆಲ್ಸಿಯಸ್ ಆಸುಪಾಸಿಯಲ್ಲಿದ್ದು, ಚಿತ್ರದುರ್ಗ ಭಾಗದಲ್ಲೂ ತಂಪಾದ ಹವಾಮಾನ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಹಲವೆಡೆ ಬೆಳಗ್ಗೆ ಮಂಜುಕವಿದ ವಾತಾವರಣವಿದ್ದರೂ ಒಣಹವೆ ಮುಂದುವರೆಯಲಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸರಾಸರಿ ಹೊಂದಿದೆ. ಕೆಲವೆಡೆ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ.
ಕರ್ನಾಟಕದ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಹಾಸನ, ಮಂಡ್ಯ, ಶಿವಮೊಗ್ಗದಲ್ಲಿ ಮುಂದಿನ 72ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ.



