ಬೆಂಗಳೂರು: ಹೊಸಕೋಟೆ ವಿಧಾನಸಭೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಪ್ರಕಟಿಸಿದರು.
ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್, ರಮೇಶ್ ಕುಮಾರ್, ಕೃಷ್ಣಭೈರೇಗೌಡ, ಜಮೀರ್ ಅಹ್ಮದ್, ಸಲೀಂ ಅಹ್ಮದ್ ಮುಖಂಡರು ಸಮ್ಮುಖದಲ್ಲಿ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸಹ ಸದಸ್ಯನಾಗಿ ಸೇರ್ಪಡೆಗೊಂಡರು.
ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಬೆಂಬಲ ಸ್ವೀಕಾರ ಮಾಡಿದ್ದಾರೆ. ಒಬ್ಬಂಟಿಯಾಗಿ ಹೋರಾಟ ಮಾಡುವ ಬದಲು ಪಕ್ಷದ ಬೆಂಬಲ ಪಡೆದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂದರು.
ಇನ್ನು ನನ್ನ ತಾಲೂಕುಗಳಲ್ಲಿ ಅನ್ಯಾಯ ನಡೆಯುತ್ತಿದೆ. ಅನ್ಯಾಯ ಎದುರಿಸಬೇಕಾದ್ರೆ ದೊಡ್ಡವರ ಬೆಂಬಲ ಬೇಕಾಗುತ್ತದೆ. ಬಿಜೆಪಿ ಪರ-ವಿರೋಧ ಪ್ರಶ್ನೆ ಅಲ್ಲ, ನಾವು ಜನಪರ ಕೆಲಸ ಮಾಡಬೇಕು. ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಕೃಷಿ ಕಾಯ್ದೆ ಜಾರಿ ಮಾಡಲು ಬಿಜೆಪಿ ಮುಂದಾಗಿದೆ.
ಇದನ್ನು ವಿರೋಧಿಸಬೇಕಾಗುತ್ತದೆ. ಅನ್ಯಾಯ ಎಂದು ಎನಿಸಿದ್ರೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲು ಕಾನೂನು ತೊಡಕುಗಳಿವೆ. ಹಾಗಾಗಿ ನಾನು ಕಾಂಗ್ರೆಸ್ಗೆ ಬಾಹ್ಯ ಬೆಂಬಲ ನೀಡಿದ್ದೇನೆ. ಕಾನೂನು ವಿಷಯ ಏನಿಲ್ಲ, ಇದು ಬಾಹ್ಯ ಬೆಂಬಲ ಅಷ್ಟೇ ಎಂದು ಶಾಸಕ ಶರತ್ ಬಚ್ಚೇಗೌಡ ಅವರು ಮಾತನಾಡಿದ್ದಾರೆ.



