ಬೆಂಗಳೂರು: ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಆಗ್ರಹಿಸಿ ನಿನ್ನೆ ನಡೆದ ಸಮಾವೇಶವನ್ನು ಕೆಲವರು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು, ಶ್ರೀ ಜಯ ಮೃತ್ಯುಂಜಯ ಸ್ವಾಮಿಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರು ಶ್ರೀಗಳನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್, ಮುರುಗೇಶ್ ನಿರಾಣಿ ಜಂಟಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಸಿ. ಪಾಟೀಲ್, ಮೀಸಲಾತಿಗೆ ನಡೆದ ಐತಿಹಾಸಿಕ ಹೋರಾಟವನ್ನು ಕೆಲವರು ಸ್ವಾರ್ಥ ಸಾಧನೆಗೆ ಬಳಸಿಕೊಂಡಿದ್ದಾರೆ. ಬೂಟಾಟಿಕೆ ಮಾತನಾಡುವುದೇ ಕೆಲವರು ಸಾಧನೆ ಎಂದುಕೊಂಡಿದ್ದಾರೆ. ಅಲ್ಲದೇ ಜಯ ಮೃತ್ಯುಂಜಯ ಸ್ವಾಮಿಗಳು ಕಾಶಪ್ಪನವರ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇದು ಶೋಭೆ ತರುವುದಲ್ಲ ಎಂದರು. ಹೈಕಮಾಂಡ್ ಬುಲಾವ್; ರಾತ್ರೋರಾತ್ರಿ ದೆಹಲಿಗೆ ತೆರಳಿದ ಯತ್ನಾಳ್
ಸಮಾವೇಶದ ಮೂಲ ಉದ್ದೇಶವಿದ್ದು 2ಎ ಮೀಸಲಾತಿ ಪಡೆಯುದಾಗಿತ್ತು. ಆದರೆ, ಮೂಲ ಉದ್ದೇಶ ಬಿಟ್ಟು ಸರ್ಕಾರ, ಸಿಎಂ ಮತ್ತು ಅವರ ಪುತ್ರರ ವಿರುದ್ಧಮಾತನಾಡಿದ್ದು ಸರಿಯಲ್ಲ. ಲಕ್ಷಾಂತರ ಜನ ಸೇರಿದ ಸಮಾವೇಶದಲ್ಲಿ ಸಿಎಂ ಮತ್ತು ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಸರ್ಕಾರ ಮೀಸಲಾತಿ ಘೋಷಣೆಯನ್ನು ಏಕಾಏಕಿ ಮಾಡಲು ಬರುವುದಿಲ್ಲ. ಅದಕ್ಕೆ ಕಾಲಾವಕಾಶ ಬೇಕು. ಸರ್ಕಾರದ ಜೊತೆ ಸ್ವಾಮಿಗಳು ಮಾತುಕತೆಗೆ ಬರಬೇಕು. ಕೆಲವೇ ಕೆಲವು ಶಾಸಕರ, ಸ್ವಾಮಿಗಳ ಅಭಿಪ್ರಾಯ ಪಡೆಯಲು ಆಗುವುದಿಲ್ಲ.
ಸಚಿವ ಮುರುಗೇಶ ನಿರಾಣಿ ಮಾತನಾಡಿ, ಸಮಾವೇಶದಲ್ಲಿ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಮಾಡಿದ್ದಾರೆ. ಇದು ಕಾನೂನು ಬಾಹಿರ. ಅಲ್ಲದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ವಿಜಯಾನಂದ ಕಾಶಪ್ಪನವರ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯತ್ನಾಳ ಕಾಂಗ್ರೆಸ್ನ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಯತ್ನಾಳ ವಾಗ್ದಾಳಿ ಮಾಡುತ್ತಿದ್ದಾರೆ. ನಾವು ರಾಜೀನಾಮೆ ನೀಡುವಂತೆ ಹೇಳಲು ಇವರಾರು. ಯತ್ನಾಳ್ ಮೊದಲು ನೀನು ರಾಜೀನಾಮೆ ನೀಡು. ಆಮೇಲೆ ನಮ್ಮ ವಿರುದ್ಧ ಮಾತನಾಡು ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ ನೀನು ಸಾಕಷ್ಟು ತಪ್ಪು ಮಾಡಿದ್ದೀಯಾ. ಮೊದಲು ನೀನು ನಿನ್ನ ಮನಸಾಕ್ಷಿಯನ್ನು ಕೇಳಿಕೋ, ನೀನ್ನನ್ನು ಶಾಸಕನನ್ನಾಗಿ ಮಾಡಿದ್ದು ನಮ್ಮ ಪಕ್ಷ. 2008 ರಲ್ಲಿ 2ಎ ಮೀಸಲಾತಿ ಚರ್ಚೆಗೆ ಬಂತು. ಆಗ ಕಾನೂನು ತೊಡಕಿತ್ತು. ಈಗ ಮೀಸಲಾತಿ ಕೇಳಿರುವುದು ಸಮಂಜಸವಾಗಿದೆ ಎಂದರು.
ವಿಜಯಾನಂದ ಕಾಶಪ್ಪನವರ ವಿರುದ್ದವೂ ಆಕ್ರೋಶ ಹೊರಹಾಕಿದ ನಿರಾಣಿ, ನಿಮ್ಮ ಅಪ್ಪ ಲಿಂಗಾಯತ ಸಮುದಾಯದ ಅಧ್ಯಕ್ಷರಾಗಿದ್ದರು. ಆಗ ನಿನ್ನ ಬಾರ್ಕೋಲು ಎಲ್ಲಿ ಹೋಗಿತ್ತು. ನಿನ್ನೆಯ ಸಮಾವೇಶ ಪಂಚಮಸಾಲಿ ಸಮಾವೇಶ ಆಗಿರಲಿಲ್ಲ. ಅದು ಕಾಂಗ್ರೆಸ್ ಸಮಾವೇಶ, ಕಾಶಪ್ಪನವರ ಸಮಾವೇಶ ಆಗಿತ್ತು. ಕಾಶಪ್ಪನವರನನ್ನು ಯಾರನ್ನು ಕೇಳಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕರು, ಮಾಜಿ ಶಾಸಕರು ಭಾಗವಹಿಸಿದ್ದರು.