ವಿಜಯಪುರ : ಏ.17 ರಂದು ನಡೆಯಲಿರುವ ಉಪ ಚುನಾವಣೆಯ ಮತದಾನ ಮುಗಿಯಲಿದೆ. ಆ ಬಳಿಕ ರಾಜ್ಯ ರಾಜಕಾರಣದ ಕುರಿತು ಏ.18 ರಂದು ಭವಿಷ್ಯ ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನನ್ನನ್ನು ಪ್ರಚಾರಕ್ಕೆ ಆಹ್ವಾನಿಸಿರಲಿಲ್ಲ. ಆದರೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದು, ನಾನು ಪ್ರಚಾರ ನಡೆಸಿದ ಬಳಿಕ ಬಿಜೆಪಿ ಅಭ್ಯರ್ಥಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಗೆಲುವು ಸುಲಭವಾಗಿದೆ ಎಂದರು.
ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ಹೈಕಮಾಂಡ್ ಬಯಸಿದಲ್ಲಿ ಅವಕಾಶ ಕಲ್ಪಿಸಿದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಿಸಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ .ರಾಜ್ಯದಲ್ಲಿ ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಸ್ಥಾನ ನಿರ್ವಹಸುವಲ್ಲಿ ಸಮರ್ಥರಿದ್ದೇವೆ. ನನ್ನ ಮೇಲೆ ಭೂ ಹಗರಣ, ಭ್ರಷ್ಟಾಚಾರದ ಆರೋಪ ಇಲ್ಲ ಎಂದರು.
ನನಗೆ ಅವಕಾಶ ನೀಡಿದ್ರೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.



