ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಗುತ್ತಿದೆ. ಇಂದು ಶಾಸಕ ತನ್ವೀರ್ ಸೇಠ್ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದು, ಅಮಾನತು ಮಾಡುವುದಾದರೆ ಮಾಡಲಿ. ಆದರೆ, ನನ್ನ ವಿರುದ್ಧ ಕ್ರಮ ಕೈಗೊಂಡರೆ ಪರಿಣಾಮ ಎದುರಿಸಲು ಸಿದ್ಧರಾಗಲಿ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, ನನಗೂ ನನ್ನದೇ ಗೌರವ ಇದೆ. ಮೈತ್ರಿ ಆಗಬಾರದು ಎಂದು ಡೀಲ್ ಆಗಿದ್ರೆ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರುವ ವ್ಯಕ್ತಿಯಲ್ಲ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ.ಪಕ್ಷ ಪೂಜೆ ಮಾಡುವವರ. ಅಮಾನತು ಮಾಡಿದರೂ ಅದಕ್ಕೂ ಸಿದ್ಧ ಎಂದಿದ್ದಾರೆ.
ಜೆಡಿಎಸ್ ಜೊತೆ ಸೇರಿರುವುದನ್ನು ಸಿದ್ದರಾಮಯ್ಯ ಬೆಂಬಲಿಗರು ವಿರೋಧಿಸಿದ್ದರು. ತನ್ವೀರ್ ಸೇಠ್ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ತನ್ವೀರ್ ಅಮಾನತು ಮಾಡಬೇಕು ಎಂದು ನಿನ್ನೆ ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಇಂದು ಸಿಡಿದೆದ್ದಿರುವ ತನ್ವೀರ್ ಸೇಠ್, ಪಕ್ಷದಲ್ಲಿ ನಾಯಕರಿಗೆ ಹಿಂಬಾಲಕರಿದ್ದಾರೆ. ಈ ಘಟನೆಯಿಂದ ಗೊಂಬೆ ಆಡಿಸುವವರು ಯಾರಿದ್ದಾರೆ ಎಂಬುದು ಗೊತ್ತು. ನನಗೂ ಹಿಂಬಾಲಕರಿದ್ದಾರೆ. ಆದರೆ ನಾನು ಯಾರನ್ನೂ ಪ್ರತಿಭಟನೆ ಮಾಡಿ ಎಂದು ಕರೆದಿಲ್ಲ. ಮೈತ್ರಿ ಮಾಡಿಕೊಳ್ಳಲು ಹೇಳಿದ್ದೇ ಸಿದ್ದರಾಮಯ್ಯ. ಆದರೆ ಗಂಡು ಮಗುವಾಗಿಲ್ಲ, ಹೆಣ್ಣು ಮಗುವಾಗಿದೆ. ಹೆಣ್ಣು ಮಗು ಬೇಡ ಅಂದರೆ ಅದಕ್ಕೆ ನಾನು ಒಪ್ಪಲ್ಲ, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ವರದಿ ನೀಡುತ್ತೇನೆ ಎಂದರು.