ಹುಬ್ಬಳ್ಳಿ: ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬ ವರದಿಯಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ಧಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬ ಬಗ್ಗೆ ಮಾಹಿತಿ ಇದೆ. ಇದನ್ನು ನಾನು ಹೇಳಿದ್ದಲ್ಲ, ವರದಿಯೇ ಬಂದಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಪಟ್ಟಕ್ಕಾಗಿ ಸೋನಿಯಾ ಗಾಂಧಿ-ರಾಹುಲ್ ಗಾಂಧಿ ನಡುವೆ ಪೈಪೋಟಿ ನಡೆಯುತ್ತಿದೆ. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ಯಾರು? ಒಂದು ರಾಜಕೀಯ ಪಕ್ಷವನ್ನೇ ಮುನ್ನಡೆಸಲಾಗದವರು ದೇಶವನ್ನು ಮುನ್ನಡೆಸುತ್ತಾರಾ? ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅಂದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯನವರದ್ದು ‘ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್’. ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಜೋಡೆತ್ತುಗಳಲ್ಲ, ಕಾಡೆತ್ತುಗಳು. ಒಬ್ಬರಿಗೊಬ್ಬರು ಕಾದಾಟ ಶುರು ಮಾಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಜೀವಮಾನದಲ್ಲಿಯೇ ಪಿಸುಮಾತು ಆಡುವವರಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಪಿಸುಮಾತು ಆಡಿದ್ದಾರೆ ಅಂದರೆ ಅದರ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ. ಮುಂದೆ ಕಾಂಗ್ರೆಸ್ ಎರಡು ಹೋಳಾಗುತ್ತೆ ಎಂದು ತಿಳಿಸಿದ್ದಾರೆ.