ಬೆಂಗಳೂರು: ರಾಜ್ಯ ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು ಮಾ.29ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕರೆ ನೀಡಿವೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ನ ಅಧ್ಯಕ್ಷ ಎಚ್.ಚ ಡಿ.ರೇವಪ್ಪ, ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ನಾವು ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ.
ವಜಾಗೊಂಡಿರುವ ಎಲ್ಲ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ಡೀಸೆಲ್ ದರ ಕಡಿಮೆ ಮಾಡಬೇಕು. ಸಾರಿಗೆ ನಿಗಮಗಳಿಗೆ ಪ್ರತಿ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಖಾಸಗಿ ಅವರಿಂದ ವಿದ್ಯುತ್ ಚಾಲಿತ ಬಸ್ ಬಳಸುತ್ತಿರುವುದನ್ನು ನಿಲ್ಲಿಸಿ, ಸಾರಿಗೆ ನಿಗಮಗಳೇ ವಿದ್ಯುತ್ ಚಾಲಿತ ಬಸ್‌ಗಳಗಳನ್ನು ಕಾರ್ಯಾಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಸಾರಿಗೆ ನಿಗಮಗಳ ಆಸ್ತಿಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಬಾರದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯು ಸಾರಿಗೆ ನಿಗಮಗಳನ್ನು ನಾಶ ಮಾಡುವ ಉದ್ದೇಶದಿಂದ ಕೂಡಿದ್ದು, ರಾಜ್ಯ ಸರ್ಕಾರ ಅದಕ್ಕೆ ವಿರೋಧ ವ್ಯಕ್ತಪಡಿಸಬೇಕು. ಈ ಎಲ್ಲ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.



