ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸುತ್ತಿರುವ ನಡೆಸುತ್ತಿರುವ ಮುಷ್ಕರ ಕೈಬಿಡಿ. ನಿಮ್ಮ ಯೂನಿಯನ್ ಲೀಡರ್ಗಳ ಮೇಲೆ ನಂಬಿಕೆ ಇಟ್ಟು, ಮುಷ್ಕರದಿಂದ ಹಿಂದೆ ಸರಿಯಬೇಕು ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಸಾರಿಗೆ ಇಲಾಖೆ ನೌಕರರು ಅವರ ಯೂನಿಯನ್ ನಾಯಕರಲ್ಲಿ ನಂಬಿಕೆ ಇರಿಸಿಕೊಳ್ಳಬೇಕು. ಅವರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ನಿಮ್ಮ ಹಿತವನ್ನು ಕಾಯುತ್ತೇವೆ. ಕರೊನಾ ಇದ್ದಾಗಲೂ ಎಲ್ಲರಿಗೂ ವೇತನ ಕೊಟ್ಟಿದ್ದೇವೆ. ವೇತನ ತಡೆ ಹಿಡಿದಿಲ್ಲ. ಜನರಿಗೆ ತೊಂದರೆ ಕೊಡಬೇಡಿ. ಲೀಡರ್ಗಳ ಮಾತಿಗೆ ಬೆಲೆ ಕೊಟ್ಟು ಮುಷ್ಕರ ಹಿಂಪಡೆಯಬೇಕು. ಸದ್ಯಕ್ಕೆ ಎಸ್ಮಾ ಜಾರಿಗೊಳಿಸುವುದಿಲ್ಲ. ನೌಕರರ ಮೇಲೆ ನಂಬಿಕೆ, ಭರವಸೆ ಇದೆ. ಮುಷ್ಕರ ಕೈಬಿಟ್ಟು ಕೆಲಸ ಶುರುಮಾಡಿ ಎಂದರು.
ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡ ಕೂಡಲೇ ಯೂನಿಯನ್ ಲೀಡರ್ಗಳನ್ನು ತಮ್ಮ ನಿವಾಸಕ್ಕೇ ಕರೆಯಿಸಿಕೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಹವಾಲುಗಳನ್ನು ಆಲಸಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಾರಿಗೆ ನೌಕರರು ಮುಷ್ಕರ ಬಿಟ್ಟು ಕೆಲಸ ಆರಂಭಿಸಬೇಕು. ಎಲ್ಲೆಲ್ಲಿ ಬಸ್ ಸಂಚಾರ ಇದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಯೂನಿಯನ್ ಲೀಡರ್ಗಳ ಜತೆಗೆ ಇನ್ನೂ ಒಂದು ಸುತ್ತಿನ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.



