ಬೆಂಗಳೂರು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಲ್ಲಿರುವ 50 ಸಹಾಯಕ ಎಂಜಿನಿಯರ್ ಮತ್ತು 14 ಪ್ರಥಮ ದರ್ಜೆ ಲೆಕ್ಕ ಸಹಾಯಕರು ಹುದ್ದೆ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ದಾವಣಗೆರೆ ಸೇರಿ 7 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.
ಮೂಲ ವೃಂದದಲ್ಲಿ 54 ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ 10 ಮೀಸಲಾತಿ ಹುದ್ದೆಗಳಿವೆ. ಫೆ. 10ರಿಂದ ಮಾರ್ಚ್ 10ರ ವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಮಾ. 14 ಕೊನೆಯ ದಿನವಾಗಿದೆ. ಸಾಮಾನ್ಯ ಮತ್ತು ಇತರ ಪ್ರವರ್ಗಗಳಿಗೆ 750 ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಸಹಾಯಕ ಎಂಜಿನಿಯರ್ ಹುದ್ದೆಗೆ ಬಿಇ/ಬಿ.ಟೆಕ್ ವಿದ್ಯಾರ್ಹತೆ ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಬಿ.ಕಾಂ. ಪದವಿ ಪಡೆದಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 35, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 38 ಮತ್ತು ಪರಿಶಿಷ್ಟ ಜಾತಿ/ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಪರೀಕ್ಷೆಗಳನ್ನು ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಶಿವಮೊಗ್ಗ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ https://kea.kar.nic.in ಭೇಟಿ ನೀಡಬಹುದು.



