ದಾವಣಗೆರೆ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) ವಿವಿಧ 194 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಒಟ್ಟು ವಿಭಾಗದಲ್ಲಿ 194 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 03 ಕೊನೆಯ ದಿನವಾಗಿರುತ್ತದೆ. ಖುದ್ದಾಗಿ, ಅಂಚೆ, ಕೋರಿಯರ್ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಶಿಮುಲ್ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
- ಪ್ರಮುಖ ದಿನ
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-02-2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2023
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03-03-2023
- ಸಹಾಯವಾಣಿ ಸಂಖ್ಯೆ: 7022918413
- ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ ವಿಳಾಸ:https://www.shimul.coop/
ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕರು -21 ಹುದ್ದೆಗಳು, ಎಂಐಎಸ್/ಸಿಸ್ಟಂ ಆಫೀಸರ್-1, ಮಾರುಕಟ್ಟೆ ಅಧಿಕಾರಿ-02, ತಾಂತ್ರಿಕ ಅಧಿಕಾರಿ -೧೮, ಕೆಮಿಸ್ಟ್ -32, ವಿಸ್ತರಣಾಧಿಕಾರಿ-17, ಆಡಳಿತ ಸಹಾಯಕ -17, ಲೆಕ್ಕ ಸಹಾಯಕ-12, ಮಾರುಕಟ್ಟೆ ಸಹಾಯಕ-10, ಕಿರಿಯ ಸಿಸ್ಟಂ ಆಪರೇಟರ್-13, ಶೀಘ್ರಲಿಪಿಗಾರರು-01 ಮತ್ತು ಕಿರಿಯ ತಾಂತ್ರಿಕ-50 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಎಲ್ಲ ಹುದ್ದೆಗಳಲ್ಲಿ ಕಿರಿಯ ತಾಂತ್ರಿಕ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿ ಗಳು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಸರ್ಟಿಫಿಕೇಟ್ ತರಬೇತಿ ಪ್ರಮಾಣ ಪತ್ರ ಸಲ್ಲಿಸಬೇಕು. ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ಸರ್ಟಿಫಿಕೇಟ್ ಸಲ್ಲಿಸಲು ವಿನಾಯಿತಿ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-3 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 500 (ಬ್ಯಾಂಕ್ ಶುಲ್ಕ ಪ್ರತ್ಯೇಕ) ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂ. 1000 (ಬ್ಯಾಂಕ್ ಶುಲ್ಕ ಪ್ರತ್ಯೇಕ). ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್/ ಇಂಟರ್‌ನೆಟ್ ಬ್ಯಾಂಕಿಂಗ್) ಮೂಲಕ ಪಾವತಿಸಬಹುದಾಗಿರುತ್ತದೆ.
ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ (ಕಿರಿಯ ತಾಂತ್ರಿಕ ಹುದ್ದೆ) ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ನೆಡೆಸಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಟ 15 ಅಂಕಗಳನ್ನು ನಿಗದಿಪಡಿಸಲಾರುತ್ತದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85 ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.