ಹುಬ್ಬಳ್ಳಿ: ತೀವ್ರ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. ಅದರಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಹಿನ್ನಡೆಯಾಗಿದೆ.
ಇಂದು ನಡೆದ ಚುನಾವಣೆಯಲ್ಲಿ 46 ಮತಗಳನ್ನು ಪಡೆಯುವ ಮೂಲಕ ಮೇಯರ್ ಆಗಿ ಬಿಜೆಪಿಯ ವೀಣಾ ಬಾರದ್ವಾಡ್ ಆಯ್ಕೆಯಾಗಿದ್ದರೆ, ಬಿಜೆಪಿಯ ಸತೀಶ್ ಹಾನಗಲ್ ಸಹ 46 ಮತಗಳನ್ನು ಪಡೆಯುವ ಮೂಲಕ ಉಪ ಮೇಯರ್ ಆಗಿ ಆಯ್ಕೆಯಾದರು. ಇನ್ನು ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸುವರ್ಣ ಸ್ಪರ್ಧಿಸಿದ್ದು ಅವರ ಪರ 37 ಮತಗಳು ಮಾತ್ರ ಚಲಾವಣೆಗೊಂಡಿವೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು ಸದಸ್ಯರ ಬಲ 82 ಆಗಿದ್ದು ಅಧಿಕಾರ ಹಿಡಿಯಲು 46 ಮತಗಳು ಬೇಕಿತ್ತು. ಬಿಜೆಪಿ ಕಾರ್ಪೊರೇಟರ್ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್ 33, ಪಕ್ಷೇತರ 6, AIMIM 3, ಜೆಡಿಎಸ್ 1 ಸ್ಥಾನ ಹೊಂದಿತ್ತು. ಇನ್ನು 8 ಜನಪ್ರತಿನಿಧಿಗಳು, 4 ಶಾಸಕರು, 1 ಸಂಸದ, 3 ಎಂಎಲ್ಸಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿಸಿ ಒಟ್ಟು 90 ಮತಗಳಿದ್ದವು, ಇದರಲ್ಲಿ ಬಿಜೆಪಿ ಮೇಯರ್ ಅಭ್ಯರ್ಥಿ ಪರ 46 ಮತಗಳು ಚಲಾವಣೆಯಾಗಿದ್ದರೆ, ಕಾಂಗ್ರೆಸ್ನ ಸುವರ್ಣ ಅವರ ಪರ 37 ಮತಗಳ ಚಲಾವಣೆಯಾಗಿವೆ.