ಚಿತ್ರದುರ್ಗ: ಲಿಂಗಾಯತರು ಹಿಂದೂ ಧರ್ಮ ಭಾಗ ಎನ್ನುವ ಕುರಿತು ಒಂದೇ ವೇದಿಯಲ್ಲಿ ಇಬ್ಬರು ಲಿಂಗಾಯತ ಶ್ರೀ ವಿಭಿನ್ನ ಹೇಳಿಕೆ ನೀಡಿದ್ದಾರೆ. ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದಧು, ಅದೇ ವೇದಿಕೆಯಲ್ಲಿದ್ದ ಹರಿಹರದ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಅವರು, ಹಿಂದೂ ಅತ್ಯಂತ ಸನಾತನ ಧರ್ಮ ಎಂದಿದ್ದಾರೆ.
ಹೊಳಲ್ಕೆರೆಯಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರ 30ನೇ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ, ಹಿಂದೂ ಧರ್ಮ ಎಂಬುದು ಎಲ್ಲ ಅನಿಷ್ಟ, ಅನಾಚಾರಗಳಿಂದ ಕೂಡಿದೆ. ಲಿಂಗಾಯತರು ಆ ಧರ್ಮದ ಭಾಗವಲ್ಲ. ಲಿಂಗಾಯತವೇ ಬೇರೆ ಧರ್ಮ. ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ಸಿಂಧೂ ನದಿಯ ಬಯಲಿನಲ್ಲಿ ಇರುವವರು ಹಿಂದೂಗಳು ಎಂದಿದ್ದಾರೆ. ನಾವು ಹಿಂದೂ ಧರ್ಮದವರಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು.
ಆದರೆ ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಬಲವಾಗಿ ತುಂಬಿಕೊಂಡಿವೆ. ಲಿಂಗಾಯತ ಒಂದು ಸ್ವತಂತ್ರ ಧರ್ಮ, ಹಿಂದೂ ಧರ್ಮದ ಭಾಗ ಅಲ್ಲ ಎಂಬುದನ್ನು ಎಲ್ಲರೂ ಮಾನ್ಯ ಮಾಡಬೇಕು.ಬಸವಣ್ಣ ಲಿಂಗಾಯತ ಧರ್ಮದ ಪ್ರತಿಪಾದಕರು. ಲಿಂಗಾಯತ ಧರ್ಮ, ಹಿಂದೂ ಧರ್ಮದ ಒಳಗಡೆ ಇರುವಂಥದ್ದಲ್ಲ. ಹಿಂದೂ ಧರ್ಮಕ್ಕೆ ಭಿನ್ನವಾಗಿ ಹುಟ್ಟಿಕೊಂಡಿದ್ದೇ ಲಿಂಗಾಯತ ಧರ್ಮ ಎಂದರು.
ವೇದ, ಪುರಾಣಗಳನ್ನ ಖಂಡಿಸಿ ಶರಣರು ಮಾತನಾಡಿದ್ದರು. ಬಹು ದೇವತಾ ಆರಾಧನೆಯನ್ನು ವಿರೋಧ ಮಾಡಿದ್ದರು. ಏಕ ದೇವ ನಿಷ್ಠೆಯನ್ನು ಎತ್ತಿ ಹಿಡಿದಿದ್ದಾರೆ. ಜಾತ್ಯಾತೀತ ಮನೋಭಾವ ಬೆಳೆಸಿದ್ದಾರೆ. ಹಿಂದೂ ಧರ್ಮಕ್ಕಿಂತ ವಿಭಿನ್ನ ಲಿಂಗಾಯತ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ, ಹಿಂದೂ ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ವೇದಿಕೆಯಲ್ಲಿಯೇ ಪ್ರತ್ಯುತ್ತರ ನೀಡಿದ ಪಂಚಮಸಾಲಿ ಪೀಠದ ಶ್ವಾಸಗುರು ವಚನಾನಂದ ಶ್ರೀಗಳು, ನಾವೆಲ್ಲ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ ಎಂದು ನುಡಿದರು. ಭಕ್ತರಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದರೂ ವಚನಾನಂದ ಶ್ರೀ ಪ್ರತಿಕ್ರಿಯೆ ಮುಂದುವರಿಸಿ ಭಾಷಣ ಮಾಡಿದರು.
ಹಿಂದೂ ಎಂಬುದು ಅತ್ಯಂತ ಸತ್ಯ ಸನಾತನವಾದುದು, ಯಾರು ಏನು ಬೇಕಾದ್ರೂ ಹೇಳಬಹುದು. ಹಿಂದೂ ಎನ್ನುವುದು ಒಂದು ವಿಶಾಲ ಮಹಾ ಸಾಗರ. ಅದರಲ್ಲಿ ಕೇವಲ ವೈದಿಕರಿರಲಿಲ್ಲ. ಅದು ಕೇವಲ ದ್ವೈತ, ಅದ್ವೈತ ಅಲ್ಲ. ಅದು ಶಕ್ತಿ, ವಿಶಿಷ್ಟಾಧ್ವೈತ ಎಲ್ಲವನ್ನು ಒಳಗೊಂಡಂಥದ್ದು. ಎಲ್ಲಾ ಮೂಲ ಪುರುಷರು ಇದ್ದದ್ದು ಹಿಂದೂ ಧರ್ಮದಲ್ಲಿ ಎಂದರು.
ವೀರಶೈವ, ಲಿಂಗಾಯತ ತತ್ವಗಳು ಬೇರೆ ಬೇರೆ ಇರಬಹುದು. ಆದರೆ ನಾವೆಲ್ಲ ಒಗ್ಗಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ. ನಿಮ್ಮ ಮಠ, ಪೀಠ ತತ್ವಗಳು ಏನೇ ಇರಬಹುದು. ಸಾಮಾಜಿಕ, ರಾಜಕೀಯ, ಬೌದ್ಧಿಕವಾಗಿ ನಾವೆಲ್ಲ ಒಂದಾಗಿರಬೇಕು ಎಂದರು.