ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೊರೊನಾ ಲಸಿಕೆ ಹಾಕಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ರಾಜ್ಯದ ಕೃಷಿ ಸಿಚಿವರು ವೈದ್ಯರನ್ನೇ ಮನೆಗೆ ಕರೆಸಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರಿನ ತಮ್ಮ ಮನೆಯಲ್ಲಿ ಸರ್ಕಾರಿ ವೈದ್ಯರಿಂದ ಕೊರೊನಾ ಲಸಿಕೆ ಪಡೆದಿದ್ದಾರೆ. ಪಾಟೀಲ್ ಪತ್ನಿ ಕೂಡ ಮನೆಯಲ್ಲಿಯೇ ಲಸಿಕೆ ಪಡೆದುಕೊಂಡಿದ್ದಾರೆ.ಮನೆಯಲ್ಲಿಯೇ ಕೂತು ಸಚಿವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನೆಗೆ ವೈದ್ಯರನ್ನು ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಬಿ.ಸಿ ಪಾಟೀಲ್, ಮಾರ್ಗಸೂಚಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ.ನಿನ್ನೆ ತಡವಾಗಿ ಮನೆಗೆ ಬಂದೆ. ಬೆಳಿಗ್ಗೆ ಜನರು ಮನೆ ಬಳಿ ಬಂದಿದ್ದಾರೆ. ಹೀಗಾಗಿ ಮನೆಗೆ ವೈದ್ಯರನ್ನ ಕರೆಸಿ ಲಸಿಕೆ ಹಾಕಿಸಿಕೊಂಡೆ. ಆದರೆ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ವಿಚಾರ ಗೊತ್ತಿಲ್ಲ. ವಿಚಾರ ಗೊತ್ತಿದ್ದರೇ ಆಸ್ಪತ್ರೆಗೆ ಹೋಗುತ್ತಿದ್ದೆ ಎಂದು ವಿವರಣೆ ನೀಡಿದ್ದಾರೆ.



