ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ, ಮಾರ್ಚ್ 31ರೊಳಗೆ 7ನೇ ವೇತನ ಆಯೋಗ ವರದಿ ಮಂಡಿಸುವಂತೆ ಆಯೋಗದ ಅಧ್ಯಕ್ಷರಿಗೆ ರಾಜ್ಯ ಸರ್ಕಾರ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿಗಳ ನಿಯೋಗವು 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಮತ್ತು ಸದಸ್ಯರನ್ನು ಭೇಟಿ ಮಾಡಿ ಮಾರ್ಚ್ 31ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಆಯೋಗದ ಎಲ್ಲ ಸದಸ್ಯರಿಗೆ ಸನ್ಮಾನ ಮಾಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ , ಆಯೋಗದಿಂದ ಈಗಾಗಲೇ ಪ್ರಶ್ನಾವಳಿ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅದರ ಪ್ರತಿಯನ್ನು ರಾಜ್ಯಾಧ್ಯಕ್ಷರಿಗೆ ನೀಡಿ ತಮ್ಮ ಸಂಘ ಹಾಗೂ ಸರ್ಕಾರಿ ನೌಕರರ ಸಹಕಾರ ನೀಡುವಂತೆ ಸೂಚಿಸಲಾಗಿದೆ. ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ನಮ್ಮ ಸಂಘವು ರಾಜ್ಯದ ಏಕೈಕ ಬೃಹತ್ ಸಂಘಟನೆಯಾಗಿದ್ದು, ಮುಂದಿನ ದಿನಗಳಲ್ಲಿ ನೀತಿ ಸಂಹಿತೆ ಜಾರಿಗೊಳ್ಳುವುದರಿಂದ ಹಾಗೂ 2023 ಮಾರ್ಚ್ 31ಕ್ಕೆ 5 ವರ್ಷ ಪೂರ್ಣಗೊಳ್ಳುವ ಮುಂಚಿತವಾಗಿ ಸರ್ಕಾರಕ್ಕೆ ವೇತನ ಆಯೋಗದ ವರದಿಯನ್ನು ಸಲ್ಲಿಸುವಂತೆ ಮನವಿ ಮಾಡಿದರು.
ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ವೇತನ ಆಯೋಗಗಳು 2 ಹಂತಗಳಲ್ಲಿ ವರದಿಗಳನ್ನು ನೀಡುವ ಸಂಪ್ರದಾಯವಿದ್ದು, ಅದರಂತೆ ಫೆಬ್ರವರಿ 2023 ಅಂತ್ಯದೊಳಗೆ ಪ್ರಥಮ ಹಂತದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ ವೇತನ ಭತ್ಯೆಗಳಿಗೆ ಗರಿಷ್ಠ ಪ್ರಮಾಣದ ಸೌಲಭ್ಯವನ್ನು ಕಲ್ಪಿಸಲು ಶಿಫಾರಸು ಮಾಡುವಂತೆ ಮನವಿ ಮಾಡಲಾಯಿತು.
ರಾಜ್ಯ ಸಂಘ ಈಗಾಗಲೇ ವೃಂದ ಸಂಘಗಳ ಸಭೆಯನ್ನು ಕರೆದು ವೇತನ ಭತ್ಯೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಕ್ರೋಢೀಕೃತ ವಿವಿಧ ಇಲಾಖೆಗಳ ಸಮಗ್ರ ಮಾಹಿತಿಯ ವರದಿಯನ್ನು ಆಯೋಗದ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಆರ್. ಶ್ರೀನಿವಾಸ್, ಮಲ್ಲಿಕಾರ್ಜುನ ಬಳ್ಳಾರಿ ಎಂ.ವಿ.ರುದ್ರಪ್ಪ, ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನ ಗೌಡ ಪಾಟೀಲ್, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ ಬಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.



