ಬೆಂಗಳೂರು : ಇನ್ಮುಂದೆ ಏಪ್ರಿಲ್ 21 ರಂದು ಇದ್ದ “ನಾಗರೀಕ ಸೇವಾ ದಿನ” ವನ್ನು “ರಾಜ್ಯ ಸರ್ಕಾರಿ ನೌಕರರ ದಿನಾಚರಣೆ” ಯನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಪ್ರತಿ ವರ್ಷ “ಗಣರಾಜ್ಯೋತ್ಸವ ದಿನ” ದಂದು ನೀಡುತ್ತಿರುವ, “ಸರ್ವೋತ್ತಮ ಸೇವಾ ಪ್ರಶಸ್ತಿ” ಯನ್ನು ಏಪ್ರಿಲ್ 21 ರಂದು ಪ್ರದಾನ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ಕೇಂದ್ರ ಸರ್ಕಾರದ ಮಾದರಿಯನ್ವಯ ರಾಜ್ಯದಲ್ಲಿ ನಾಗರಿಕ ಸೇವಾ ದಿನವನ್ನು “ರಾಜ್ಯ ಸರ್ಕಾರಿ ನೌಕರರ ದಿನಾಚರಣೆ” ಯನ್ನಾಗಿ ಪ್ರತಿ ವರ್ಷ ಏಪ್ರಿಲ್ 21 ರಂದು ನಿಗದಿಪಡಿಸಲಾಗಿದೆ.ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೂ ಒಂದು ದಿನ ಇರಲಿ ಎಂಬ ಬೇಡಿಕೆಗೆ ಸರ್ಕಾರ ಸಮ್ಮತಿಸಿದ್ದು, ಈ ವರ್ಷದಿಂದಲೇ ಸರ್ಕಾರಿ ನೌಕರರ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ



