ಬೆಂಗಳೂರು: ಹೊಸ ವರ್ಷಾಚರಣೆಗೆ ಡ್ರಗ್ ಸರಬರಾಜು ಮಾಡಲು ಸಂಗ್ರಹಿಸಿಕೊಂಡಿದ್ದ ದಾವಣಗೆರೆ ಮೂಲದ ಆರೋಪಿಯಿಂದ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು 2.50 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಟ್ಯಾಟೂ ಆರ್ಟಿಸ್ಟ್ ಆಗಿದ್ದ ದಾವಣಗೆರೆ ಮೂಲದ ರಕ್ಷಿತ್ ಆರ್.ಎಂ (30) ಬಂಧಿತ ಆರೋಪಿ. ಡ್ರಗ್ ಪೆಡ್ಲರ್ ಆಗಿದ್ದ ಆರೋಪಿ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಚೊಕ್ಕನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ, ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸಂಗ್ರಹಿಸಿಟ್ಟಿದ್ದ 2.50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದುಕೊಂಡು ಟ್ಯಾಟೂ ಹಾಕುವ ಹವ್ಯಾಸ ಹೊಂದಿದ್ದು, ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದನು. ಆರೋಪಿ ಗಾಂಜಾ ಸೇರಿದಂತೆ ಪ್ರಮುಖವಾಗಿ ಹೈಡ್ರೋ ಗಾಂಜಾವನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ.
ಮನೆಯನ್ನು ಶೋಧಿಸಿ 3 ಕೆಜಿ ಹೈಡ್ರೊ ಗಾಂಜಾ, 16 ಕೆಜಿ ಗಾಂಜಾ, 40 ಎಲ್‌ಎಸ್ಡಿ ಸ್ಟ್ರಿಪ್ಸ್, 130 ಗ್ರಾಂ ಚರಸ್, 2.3 ಗ್ರಾಂ ಎಂಡಿಎಂಎ ಕ್ರಿಸ್ಟಲ್, 3 ತೂಕದ ಯಂತ್ರ, 2 ಮೊಬೈಲ್ ಹಾಗೂ 1.30 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಡ್ರಗ್ ಪೆಡ್ಲರ್ ಹೊರ ರಾಜ್ಯ ಹಾಗೂ ಹೊರದೇಶದಿಂದ ಮಾದಕವಸ್ತುಗಳನ್ನು ತಂದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರಾಟ ಸಂಗ್ರಹಿಸಿರುವುದು ಗೊತ್ತಾಗಿದೆ. ಈತ ಮನೆಮನೆಗೆ ಹೋಗಿ ಟ್ಯಾಟೂ ಹಾಕುತ್ತಿದ್ದನು. ಆ ವೇಳೆ ಅವರನ್ನು ಪರಿಚಯಿಸಿಕೊಂಡು ಆಗಾಗ್ಗೆ ಸಂಪರ್ಕಿಸಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಡ್ರಗ್ ಪೆಡ್ಲರ್ ಮತ್ತೊಬ್ಬ ಸಹಚರನ ಜೊತೆ ಸೇರಿಕೊಂಡು ಹೊರರಾಜ್ಯಗಳಾದ ಗೋವಾದಿಂದ ಎಲ್‌ಎಸ್ ಡಿ ಸ್ಟ್ರಿಪ್ಸ್ , ಥೈಲ್ಯಾಂಡ್ ನಿಂದ ಹೈಡ್ರೊ ಗಾಂಜಾ, ಹಿಮಾಚಲ ಪ್ರದೇಶದಿಂದ ಚರಸ್ ಹಾಗೂ ತೆಲಂಗಾಣದಿಂದ ಗಾಂಜಾವನ್ನು ಖರೀದಿಸಿಕೊಂಡು ಬಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯ ಸಹಚರ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ.