ದಾವಣಗೆರೆ: ಸಿಎಂ ಸದನದಲ್ಲಿ ನಿಢಿದ ಭರವಸೆಯಂತೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 6 ತಿಂಗಳೊಳಗೆ 2ಎ ಮೀಸಲಾತಿ ನೀಡದಿದ್ದರೆ, ಅಕ್ಟೋಬರ್ 15ರ ನಂತರ 25 ಲಕ್ಷ ಜನ ಸೇರಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸರ್ಕಾರ ಸೆಪ್ಟೆಂಬರ್ 15ರೊಳಗೆ ಮೀಸಲಾತಿ ನೀಡುವ ವಿಶ್ವಾಸವಿದೆ. ಯಡಿಯೂರಪ್ಪ ಅವರು ನಾಲ್ಕು ಗೋಡೆಯ ಮಧ್ಯೆ ಮಾತು ಕೊಟ್ಟಿಲ್ಲ. ಅಧಿವೇಶನದಲ್ಲಿ ಮಾತು ಕೊಟ್ಟಿದ್ದಾರೆ.ಹೀಗಾಗಿ ಹೋರಾಟಕ್ಕೆ ಸ್ವಲ್ಪ ವಿರಾಮ ನೀಡಿದ್ದೇವೆ. ಒಂದು ವೇಳೆ ಭರವಸೆ ಈಡೇರಿಸದಿದ್ದರೆ ಅಕ್ಟೋಬರ್ 15ರ ನಂತರ ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ ಎಂದು ಶ್ರೀಗಳು ಸುದ್ದಿಗೀಷ್ಟಿಯಲ್ಲಿ ಎಚ್ಚರಿಕೆ ನೀಡಿದರು.
ಜನಗಣತಿ ಹಾಗೂ ಶಾಲಾ ದಾಖಲಾತಿಗಳಲ್ಲಿ ಎಲ್ಲರೂ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು. ಈ ರೀತಿ ನಮೂದಾಗದೇ ಇದ್ದರೆ 2ಎ ಮೀಸಲಾತಿ ಸಿಗುವುದು ಕಷ್ಟ. ಭಕ್ತರು ಸಮಾಜದ ಬೆನ್ನೆಲುಬು, ನಮ್ಮ ಮತ್ತು ಭಕ್ತರ ನಡುವೆ ತಾಯಿ ಮಗನ ಸಂಬಂಧ ಇದೆ. ದಾವಣಗೆರೆ ನಗರದಿಂದಲೇ ಭಿನ್ನಾಭಿಪ್ರಾಯ ಮರೆತು ಹೋರಾಟ ಮಾಡಿದ್ದೇವೆ. ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಕಾಲಿನಲ್ಲಿ ಬೊಬ್ಬೆ ಬಂದರೂ ಹೋರಾಟದಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿದ್ದಾರೆ ಎಂದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಉಪಸ್ಥಿತರಿದ್ದರು.



