ಬೆಂಗಳೂರು: ರಾಜ್ಯದಲ್ಲಿ ಮೂರು ಸಾವಿರ ಭೂಮಾಪಕರ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಾ.ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಖಾಲಿ ಇರುವ ಭೂ ಮಾಪಕರನ್ನು ನೇಮಕ ಮಾಡಲು ಮೂರು ಸಾವಿರ ಭೂ ಮಾಪಕರ ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಮೀನುಗಳ ಸರ್ವೆ ಕಾರ್ಯ ತ್ವರಿತವಾಗಿ ನಡೆಸಲು ಅನುಕೂಲವಾಗಲಿದೆ ಎಂದರು.
ಪ್ರಸ್ತುತ 4020 ಭೂ ಮಾಪಕರಿದ್ದು, ಈ ಪೈಕಿ 3379 ಭೂ ಮಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇತ್ತೀಚೆಗೆ 2685ಭೂ ಮಾಪಕರನ್ನು ಲೈಸನ್ಸ್ ಪಡೆದವರನ್ನು ನೇಮಿಸಿಕೊಂಡು ಸರ್ವೇ ಕಾರ್ಯಕ್ಕೆ ನಿಯೋಜಿಸಿದೆ. ಪ್ರತಿ ತಾಲೂಕಿನಲ್ಲೂ ಭೂ ಮಾಪಕರ ಕೊರತೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಇನ್ನೂ ಆರು ತಿಂಗಳಲ್ಲಿ ಸರ್ವೆ ಪ್ರಕ್ರಿಯೆ ಮುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯೆ ಪ್ರವೇಶಿಸಿ ಪ್ರತಿ ತಾಲೂಕಿನಲ್ಲಿ ಭೂ ಮಾಪಕರ ಸಮಸ್ಯೆ ಇದೆ. ಒಬ್ಬರಿಂದ ಏನೂ ಮಾಡಲು ಸಾಧ್ಯವಿಲ್ಲ. ಲೈಸೆನ್ಸ್ ಪಡೆದವರು ಎಲ್ಲವನ್ನೂ ಮಾಡಲಾಗದು. ಅವರಿಗೆ ಇತಿಮಿತಿ ಇರುವುದರಿಂದ ಭೂ ವ್ಯಾಜ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಕೂಡಲೇ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ಮಾಡಿದರು.
ಶಾಸಕ ಕುಮಾರ ಬಂಗಾರಪ್ಪ, ಮೊದಲು ಕಂದಾಯ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕಾತಿ ನಿಲ್ಲಿಸಿ. ನಿಮ್ಮ ಇಲಾಖೆಗೆ ಶಾಶ್ವತವಾಗಿರುವ ಸಿಬ್ಬಂದಿ ನೇಮಕ ಮಾಡಿ. ಲಕ್ಷಾಂತರ ಪೊಡಿ ಪ್ರಕರಣಗಳು ಬಾಕಿ ಇವೆ. ಇದು ರಾಜ್ಯದ ಸಮಸ್ಯೆ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಅಶೋಕ್, ಈ ಎಲ್ಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು, ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇಲಾಖೆಯಲ್ಲಿ ಹಲವು ಬದಲಾವಣೆ ತರಲು ತೀರ್ಮಾನಿಸಿದ್ದು, ಹೊಸ ಸಾಫ್ಟ್‌ವೇರ್ ಶೀಘಿ, ಆರು ತಿಂಗಳಲ್ಲಿ ಬಾಕಿ ಇರುವ ಎಲ್ಲ ಪ್ರಕರಗಣಳು ಇತ್ಯರ್ಥವಾಗು ನಿರೀಕ್ಷೆ ಎಂದರು.



