ಮೈಸೂರು: ರಾಜ್ಯ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ..? ರಾಜ್ಯ ಹಾಗೂ ಕೇಂದ್ರದಲ್ಲಿ ಎಲ್ಲಾದರೂ ಅವರ ನಾಯಕತ್ವ ಇದೆಯೇ? ಗೋಮಾಂಸ ತಿನ್ನುವುದೇ ಮೈಸೂರಿನ ಮುಖಂಡನ ದೊಡ್ಡ ಸಾಧನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಸದಸ್ಯರ ‘ಜನ ಸೇವಕ್’ ಸನ್ಮಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವಂಥದ್ದಲ್ಲ. ನಮ್ಮನ್ನು ಕೆಣಕಿ ಮಾಧ್ಯಮಗಳಿಗೆ ನಾನು ಏನು ಪ್ರತಿಕ್ರಿಯೆ ಕೊಡಬಹುದು ಎಂಬುದಕ್ಕಾಗಿ ಕಾದಿದ್ದಾರೆ. ಹೀಗಾಗಿ ನಾನು ಪ್ರತಿಕ್ರಿಯೆ ಕೊಡುವುದನ್ನೇ ಕಡಿಮೆ ಮಾಡಿದ್ದೇನೆ ಎಂದರು.
ಈ ಬಾರಿಯ ನವದೆಹಲಿಗೆ ಭೇಟಿ ನೀಡಿದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಸಾಧನೆ ಬಗ್ಗೆ ಮಾಹಿತಿ ನೀಡಿದ್ದೇನೆ. ರಾಜ್ಯದ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ150 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ನಾನು ಕೂಡ ಪುರಸಭೆ ಸದಸ್ಯನಾಗಿ ಶಿಕಾರಿಪುರದಲ್ಲಿ ರಾಜಕೀಯ ಜೀವನ ಆರಂಭಿಸಿದೆ. ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ. ಇಡೀ ರಾಜ್ಯದಲ್ಲಿ ಹುಚ್ಚನಂತೆ ಗ್ರಾಮ ಗ್ರಾಮಗಳಿಗೂ ಅಲೆದಿದ್ದೇನೆ, ಹಲವಾರು ಹೋರಾಟ ನಡೆಸಿದ್ದೇನೆ ಎಂದರು. ಈ ವೇಳೆ ನೂತನ ಸದಸ್ಯರಿಗೆ ಅಭಿನಂದಿಸಿದರು. ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿ ಪೂಜೆ ಸಲ್ಲಿಸಿ 30 ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಜನ ಸೇವಕ್ ಸಮಾವೇಶಕ್ಕೆ ಚಾಲನೆ ನೀಡಿದರು.



