ಬೆಂಗಳೂರು: ತಾನು ಆರ್ ಎಸ್ ಎಸ್ ಮುಖಂಡನೆಂದು ಹೇಳಿಕೊಂಡು ರಾಜಕಾರಣಿಗಳಿಗೆ ಕೋಟಿ ಕೋಟಿ ವಂಚಿಸಿದ ಯುವರಾಜ್ ವಿರುದ್ಧ ಇದೀಗ ಒಂದೊಂದೇ ದೂರುಗಳು ದಾಖಲಾಗುತ್ತಿವೆ. ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ನಂಬಿಸಿ ಬಿಜೆಪಿ ಮುಖಂಡರೊಬ್ಬರಿಗೆ 10 ಕೋಟಿ ವಂಚಿದ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಸಿಸಿಬಿ ಪೊಲೀಸರ ವಶದಲ್ಲಿರುವ ಯುವರಾಜ್ ವಿರುದ್ಧ ಮೋಸ ಹೋದವರು ದೂರು ದಾಖಲಿಸುತ್ತಿದ್ದಾರೆ. ಆರ್‌ಎಸ್‌ಎಸ್ ನಾಯಕ ಮುಖವಾಡ ಧರಿಸಿ ಹಲವರಿಗೆ ಮೋಸ ಮಾಡಿದ್ದಾರೆ. ಉದ್ಯಮಿ ಸುಧೀಂದ್ರರೆಡ್ಡಿಗೆ ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಒಂದು ಕೋಟಿ ಮೋಸ ಮಾಡಿದ ಬಗ್ಗೆ ನಿನ್ನೆ ಯುವರಾಜನನ್ನು ಸಿಸಿಬಿ ಪೊಲೀಸರು ಮನೆ ಮೇಲೆ ದಾಳಿ ಮಾಡಿ ವಶಕ್ಕೆಪಡಿಸಿಕೊಂಡಿದ್ದರು. ಈ ವೇಳೆ 91 ಕೋಟಿ ಮೌಲ್ಯದ ಚೆಕ್ ಗಳು ಹಾಗೂ ದಾಖಲೆಗಳು ಪತ್ತೆಯಾಗಿದ್ದವು.
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಚೆಕ್ ಪಡೆದುಕೊಂಡಿದ್ದ ಸಂಗತಿ ಹೊರ ಬಂದಿದ್ದು, ಯುವರಾಜ ಬಂಧನವಾಗುತ್ತಿದ್ದಂತೆ ಹಲವಾರು ದೂರುಗಳು ಸಿಸಿಬಿಗೆ ದೂರು ನೀಡಲು ಮುಂದಾಗಿದ್ದಾರೆ.