ಬೆಂಗಳೂರು: ಜಾತಿಗಣತಿಯ ಕಾಂತರಾಜು ವರದಿ ಸ್ವೀಕಾರಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದ್ದು, ವರದಿ ಸ್ವೀಕರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. ಹೀಗಾಗಿ ವರದಿ ತಿರಸ್ಕಾರಕ್ಕೆ ಆಗ್ರಹಿದ್ದಾರೆ.ಒಕ್ಕಲಿಗ ಸಮುದಾಯ ಕಾಂತರಾಜು ವರದಿ ಸ್ವೀಕರ ವಿರೋಧಿಸಿ ಸಹಿ ಸಂಗ್ರಹ ಮಾಡಿದೆ. ಇದರ ಜೊತೆ ಲಿಂಗಾಯತ ಸಮುದಾಯದಿಂದಲೂ ಆಕ್ಷೇಪ ವ್ಯಕ್ತವಾಗಿದೆ. ವರದಿ ಜಾರಿ ಮಾಡಿಯೇ ಸಿದ್ಧ ಎಂದು ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದಂತಾಗಿದೆ.
ಸದಾಶಿವ ನಗರದ ಕಚೇರಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿ, ಜಾತಿ ಗಣತಿ ವಿಚಾರವನ್ನು ಮುನ್ನೆಲೆಗೆ ತಂದರೆ ಲೋಕಸಭಾ ಚುನಾವಣೆಯಲ್ಲಿ 100% ತೊಂದರೆ ಆಗುತ್ತದೆ. ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆಗಿತ್ತಲ್ಲ, ಅದೇ ರೀತಿ ಆಗಲಿದೆ. ಲಿಂಗಾಯತರ ಒಟ್ಟಾರೆ ಜನಸಂಖ್ಯೆ 60-70 ಲಕ್ಷ ಅಂತ ಅದರಲ್ಲಿ ಇದೆಯಂತೆ. ಇದನ್ನೆಲ್ಲ ಒಪ್ಪಲು ಸಾಧ್ಯವೇ ಎಂದು ಕೇಳಿದ ಅವರು, ನಾವೂ ಸಹ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಬಿಜೆಪಿ, ಜೆಡಿಎಸ್ ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಈಗಾಗಲೇ ಈ ಬಗ್ಗೆ ಸಿದ್ದರಾಮಯ್ಯನವರ ಬಗ್ಗೆ ಚರ್ಚೆ ಮಾಡಿದ್ದೇನೆ. ನೋಡೋಣ ತಡಿಯಪ್ಪ ಎಂದು ಹೇಳಿದ್ದಾರೆ ಎಂದು ಶಿವಶಂಕರಪ್ಪ ತಿಳಿಸಿದ್ದಾರೆ. ಯಾರು ವಿರೋಧ ಮಾಡ್ತಾರೊ ಅದನ್ನ ಸಿಎಂ ಬೇಕು ಅಂತಾರೆ, ಅವರು ಹಾಗೆಯೇ ಎಂದು ನಗುತ್ತಾ ಹೇಳಿದರು ಶಿವಶಂಕರಪ್ಪ.
ಈ ಹಿಂದೆ ಪ್ರತ್ಯೇಕ ಲಿಂಗಾಯದ ಧರ್ಮ ಅಂತ ಹೋದವರೆಲ್ಲ ಸೋತು ಹೋಗಿದ್ದಾರೆ. ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ರು ಎಂದು ಹೇಳಿದರು. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಶಾಮನೂರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವನು ಹಿಂದೆ ಹೀಗೇ ಏನೇನೋ ಮಾತಾಡ್ತಿದ್ದ. ಅವನು ಕ್ಯಾಬಿನೆಟ್ ಹೊರಗಿದ್ದಾನೆ. ಅದಕ್ಕೆ ಏನೋನೊ ಮಾತಾಡ್ತಿದ್ದಾನೆ ರಾಯರೆಡ್ಡಿ ವಿರುದ್ಧ ಕಿಡಿಕಾರಿದರು.



