ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮರು ಜಾತಿ ಗಣತಿ (caste Census) ನಡೆಸಲು ಸರ್ಕಾರ ತೀರ್ಮಾನಿಸಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಮರು ಜಾತಿಗಣತಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೇವಲ 15 ದಿನಗಳಲ್ಲಿ ಜಾತಿಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು (ಜು.23)ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 22ರಿಂದ 15 ದಿನ ಮರು ಜಾತಿಗಣತಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸಭೆಯ ಹೈಲೆಟ್ಸ್
-
22ರಿಂದ ಅಕ್ಟೋಬರ್ 7ರವರೆಗೆ ಜಾತಿಗಣತಿ
-
7ಕೋಟಿ ಜನರ ಸಮೀಕ್ಷೆ
-
ಹಿಂದುಳಿದ ವರ್ಗಗಳ ಆಯೋಗ ಪ್ರಸ್ತಾವನೆ ಸಲ್ಲಿಸಿದ್ದರಿಂದ ಮರು ಸಮೀಕ್ಷೆ
-
ಈ ಬಾರಿ ಮೊಬೈಲ್ ಆಪ್ ಮೂಲಕ ಸಮೀಕ್ಷೆ
-
ತೆಲಂಗಾಣ ಮಾದರಿ ಪಾಲಿಸಲು ಸೂಚನೆ
-
ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು
ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹೀಗಾಗಿ ರಾಜ್ಯದ 7ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನು ಇದೆಯೇ ಇಲ್ಲವೇ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಯಬೇಕು. ಈ ಸಮೀಕ್ಷೆ ವರದಿ ಮುಂದಿನ ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಆಧಾರವಾಗಲಿದೆ. ಈ ಬಾರಿಯ ಸಮೀಕ್ಷೆ ದೇಶದಲ್ಲೇ ಮಾದರಿ ಸಮೀಕ್ಷೆಯಾಗಬೇಕು ಎಂದರು.
ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಅಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು ಎಂದರು.
ಕಾಂತರಾಜು ಆಯೋಗ 54 ಪ್ರಶ್ನೆಗಳನ್ನು ಸಿದ್ದಪಡಿಸಿ ಮನೆಗಳಿಗೆ ಭೇಟಿ ನೀಡಿ ಈ ಹಿಂದೆ ಸಮೀಕ್ಷೆ ನಡೆಸಿತ್ತು. ಈ ಬಾರಿಯ ಸಮೀಕ್ಷೆಯಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಈ ಬಾರಿ ಮೊಬೈಲ್ ಆಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು.
ತೆಲಂಗಾಣದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕುರಿತು ಅಧ್ಯಯನ ನಡೆಸಲು ಸೂಚನೆ. ಸಮೀಕ್ಷೆ ಕಾರ್ಯದ ಮೇಲುಸ್ತುವಾರಿಗೆ ಉನ್ನತಮಟ್ಟದ ಸಮಿತಿ ರಚಿಸಲು ತಿರ್ಮಾನ. ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು.
ಈ ಬಾರಿ ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದೆ. ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುವುದು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.