ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿ.ಎಸ್. ಯಡಿಯೂರಪ್ಪನವರು ಇಂದು ತಮ್ಮ 8ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇಂದು ಮಧ್ಯಾಹ್ನ 12.05 ನಿಮಿಷಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹಣಕಾಸು ಸಚಿವರಾಗಿ ವಿಧಾನಸಭೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.
ಇಂದಿನ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆಯಾಗಿರುವ ವಿಚಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸುವುದು. ಈಗಾಗಲೇ ಗಗನಕ್ಕೇರಿರುವ ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲಿನ ತೆರಿಗೆಯನ್ನು ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಒತ್ತಡವಿದೆ. ಕಳೆದ ಆರ್ಥಿಕ ವರ್ಷದಲ್ಲಿ ಲಾಕ್‌ಡೌನ್ , ಪ್ರವಾಹ ಹಾಗೂ ಬರದ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಯಾರಿಗೂ ಹೊರೆಯಾಗದ ಸಮತೋಲಿತ ಬಜೆಟ್ ಮಂಡನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ.
2020ರ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸಂಪನ್ಮೂಲ ಕ್ರೂಢೀಕರಣ ಹೆಚ್ಚಿಸಲು ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿತ್ತು. ಪೆಟ್ರೋಲ್ ಮೇಲಿನ ತೆರಿಗೆ 32 ಪರ್ಸೆಂಟ್ ನಿಂದ 35ಕ್ಕೆ ಏರಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆ 21 ರಿಂದ 24ಕ್ಕೆ ಏರಿಸಲಾಗಿತ್ತು. ಹೀಗಾಗಿ ಸದ್ಯ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವ ತೈಲ ಬೆಲೆಗಳ ಮೇಲಿನ ತೆರಿಗೆ ಇಳಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.