ದಾವಣಗೆರೆ: ಈ ಬಾರಿಯ ಬಜೆಟ್ ನಲ್ಲಿ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಗೆ ಮತ್ತೆ ನಿರಾಸೆ ಎದುರಾಗಿದೆ. ಜಿಲ್ಲೆಗೆ 20 ಕೋಟಿ ವೆಚ್ಚದ 50 ಹಾಸಿಗೆಯ ಜಯದೇವ ಹೃದ್ರೋಗ ವಿಜ್ಞಾನ ಕೇಂದ್ರದ ಉಪ ಕೇಂದ್ರ ತೆರೆಯಲು ಅನುದಾನ ಬಿಟ್ಟರೆ ಮತ್ತೆ ಯಾವುದೇ ಹೊಸ ಘೋಷಣೆ ಮಾಡಿಲ್ಲ. ಈ ಮೂಲಕ ದಾವಣಗೆರೆ ಮತ್ತೆ ನಿರಾಸೆ ಆಗಿದೆ.
ದಾವಣಗೆರೆ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಸಹ ನೀಡಿಲ್ಲ. ಕನಿಷ್ಠ ಪಕ್ಷ ಅನುದಾನವನ್ನಾದರೂ ನೀಡುವ ನಿರೀಕ್ಷೆ ಇತ್ತು. ಆದರೆ, ಈ ಬಾರಿ ಮತ್ತೆ ನಿರಾಸೆ ಎದುರಾಗಿದೆ.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ಬಿಜೆಪಿ ಆರು ಶಾಸಕರು, ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಜಿಲ್ಲೆಗೆ ಬಜೆಟ್ ನಲ್ಲಿ ಏನು ಪ್ರಸ್ತಾವನೆ ಸಲ್ಲಿಸಬೇಕು ಎಂಬ ಚರ್ಚೆಯೂ ನಡೆದಿತ್ತು. ದಾವಣಗೆರೆ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ , ಕತ್ತಲಗೆರೆ ಕೃಷಿ ಕೇಂದ್ರವನ್ನು ಅಗ್ರಿಕಲ್ಚರ್ ಕಾಲೇಜ್ ಆಗಿ ಮಾರ್ಪಡು ಮಾಡಬೇಕು. ದಾವಣಗೆರೆ ಜಿಲ್ಲೆಗೆ ಕೆಎಂಎಫ್ ನ ಶಿವಮೊಗ್ಗ ಹಾಲು ಒಕ್ಕೂಡಟದಿಂದ ಬೇರ್ಪಡಿಸಿ, ಪ್ರತ್ಯೇಕ ಒಕ್ಕೂಟ ಮಾಡಬೇಕು ಎಂದು ಸೇರಿದಂತೆ ಅನೇಕ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದೀಗ ಕೇವಲ ಒಂದು ಆಸ್ಪತ್ರೆಗೆ ಮಾತ್ರ ಅನುದಾನ ನೀಡುವ ಮೂಲಕ ಜಿಲ್ಲೆಗೆ ಅನ್ಯಾಯವಾಗಿದೆ.



