Connect with us

Dvgsuddi Kannada | online news portal | Kannada news online

ಮೀಸಲಾತಿ ಹೆಚ್ಚಳ ಅತ್ಯಂತ ಸೂಕ್ಷ್ಮ ವಿಚಾರ; ಅವಸರದ ನಿರ್ಧಾರವಿಲ್ಲ: ಸಿಎಂ

ಪ್ರಮುಖ ಸುದ್ದಿ

ಮೀಸಲಾತಿ ಹೆಚ್ಚಳ ಅತ್ಯಂತ ಸೂಕ್ಷ್ಮ ವಿಚಾರ; ಅವಸರದ ನಿರ್ಧಾರವಿಲ್ಲ: ಸಿಎಂ

ಬೆಂಗಳೂರು: ಮೀಸಲಾತಿ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ವಿಚಾರದಲ್ಲಿ ಅವಸರದ ತೀರ್ಮಾನವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಒಂದು ಸಮುದಾಯದ ಬೇಡಿಕೆ ನ್ಯಾಯ ಬದ್ಧವಾಗಿದ್ದರೂ ಅದನ್ನು ಈಡೇರಿಸುವ ಪ್ರಯತ್ನದಲ್ಲಿ ಮತ್ತೊಂದು ಸಮುದಾಯಕ್ಕೆ ಅನ್ಯಾಯವಾಗದಂತೆ ಮತ್ತು ಸಾಮರಸ್ಯ ಕದಡದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದೆ.
ಈ ವಿಚಾರದಲ್ಲಿ ಅವಸರದ ತೀರ್ಮಾನ ಸಾಧ್ಯವಿಲ್ಲ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವ ಬೇಡಿಕೆ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸುವ ಬಗ್ಗೆ ಮುಖ್ಯಮಂತ್ರಿಯವರು ಕಳೆದ ಅಧಿವೇಶನದಲ್ಲಿ ಹೇಳಿದ್ದರು. ಆದರೆ, ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಇಚ್ಛೆ ಇದೆಯೋ, ಇಲ್ಲವೋ ಎಂಬುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಇದು ಶೂನ್ಯವೇಳೆಯಲ್ಲಿ ತರುವಂತಹ ವಿಷಯ ಅಲ್ಲದಿದ್ದರೂ ಸಭಾಧ್ಯಕ್ಷರು ಅನುಮತಿ ನೀಡಿದ್ದರಿಂದ ಶಾಸಕರ ಪ್ರಸ್ತಾಪಕ್ಕೆ ಉತ್ತರ ನೀಡುತ್ತಿದ್ದೇನೆ. ಮೀಸಲಾತಿ ನೀಡಲು, ಹೆಚ್ಚಿಸಲು, ಒಂದು ವರ್ಗದಿಂದ ಮತ್ತೂಂದು ವರ್ಗಕ್ಕೆ ಸೇರಿಸಲು ಅದರದೇ ಆದ ಕಾನೂನು ಇದೆ. ಸಂವಿಧಾನದ ನಿಯಮಗಳಿವೆ ಹಾಗೂ ನ್ಯಾಯಾಲಯದ ಹಲವಾರು ತೀರ್ಪುಗಳಿವೆ. ಮೀಸಲಾತಿ ಪ್ರಮಾಣ ಶೇ.50 ದಾಟಬಾರದು ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮಿತಿ ಹೇರಿದೆ. ಅದನ್ನೇ ಈವರೆಗೆ ಪಾಲಿಸಲಾಗುತ್ತಿದೆ. ಸರ್ಕಾರ ಏನೇ ಮಾಡಿದರೂ ಕಾನೂನು ರೀತಿಯಲ್ಲಿ ಮಾಡಬೇಕು ಎಂದರು.

ಮೀಸಲಾತಿ ನಿಗದಿಗೆ ವಾಸ್ತವ ದತ್ತಾಂಶ ಮುಖ್ಯ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಕೆಲಸ ಮಾಡುತ್ತಿದೆ. ಬಹುತೇಕ ಜಿಲ್ಲೆಗಳ ಪ್ರವಾಸ ಕೈಗೊಂಡಿದೆ. ಇನ್ನೂ 13 ಜಿಲ್ಲೆಗಳ ಪ್ರವಾಸ ಬಾಕಿ ಇದೆ. ಆಯೋಗದ ಕೆಲಸ ಶೇ.50ರಷ್ಟು ಆಗಿದೆ. ಆಯೋಗದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top