ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ.26 ರಂದು ಬಳ್ಳಾರಿ ಬಂದ್ ಗೆ ಕರೆ ನೀಡಿವೆ. ಇದಕ್ಕೆ ಪ್ರತಿಕ್ರಿಸಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಬಲವಂತವಾಗಿ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಬಲವಂತದ ಬಂದ್ ಅಥವಾ ಜನರಿಗೆ ತೊಂದರೆಯಾಗುವಂತೆ ಹೋರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಸಾಂಕೇತಿಕ ಹೋರಾಟ ಮಾಡಲಿ ಎಂದರು.
ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ರಾಮನಗರ, ಯಾದಗಿರಿಗಳು ಜಿಲ್ಲೆ ಮಾಡಿದಂತೆ ವಿಜಯನಗರ ಜಿಲ್ಲೆ ಮಾಡುವುದಕ್ಕೆ ಸರಕಾರ ತೀರ್ಮಾನಿಸಿದೆ. ವಿಜಯನಗರ ಜಿಲ್ಲೆಯ ಕೂಗು ಇಂದು ನಿನ್ನೆಯದಲ್ಲ; ಇದು ಬಹಳದಿನಗಳಿಂದ ಇತ್ತು. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಬಹುದಿನಗಳ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದರು.



