Connect with us

Dvg Suddi-Kannada News

ಬ್ಯಾಂಕ್ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಮಾ. 15, 16 ರಂದು ಮುಷ್ಕರ

ಪ್ರಮುಖ ಸುದ್ದಿ

ಬ್ಯಾಂಕ್ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಮಾ. 15, 16 ರಂದು ಮುಷ್ಕರ

ದಾವಣಗೆರೆ: ಕೇಂದ್ರ ಸರಕಾರ ಇತ್ತೀಚಿಗೆ ಮಂಡಿಸಿದ ಬಜೆಟ್‌ನಲ್ಲಿ ಬ್ಯಾಂಕ್ ಖಾಸಗೀಕರಣ ಪ್ರಸ್ತಾಪವನ್ನು ವಿರೋಧಿಸಿ ದೇಶವ್ಯಾಪಿ ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ‌ ತಿಳಿಸಿದ್ದಾರೆ.

ಕಳೆದ ಪೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವರು ಐಡಿಬಿಐ ಬ್ಯಾಂಕ್ ಹಾಗೂ 2 ಸಾರ್ವಜನಿಕ ವಲಯದ ಬ್ಯಾಂಕುಗಳ  ಖಾಸಗಿಕರಣ, ಜೀವ ವಿಮಾ ನಿಗಮದಲ್ಲಿ ಬಂಡವಾಳ ಹಿಂತೆಗೆತ, ಒಂದು ಸಾಮಾನ್ಯ ವಿಮಾ ಕಂಪೆನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.74%ವರೆಗೆ ಅವಕಾಶ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತ ಮತ್ತು ಅವುಗಳು ಮಾರಾಟ ಮುಂತಾದ ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ದೇಶ ವಿರೋಧಿ ಮತ್ತು ಜನ ವಿರೋಧಿಯಾದ ಈ ಪ್ರಸ್ತಾಪಗಳನ್ನು ಖಂಡಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು (UFBU) ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದಲ್ಲಿ‌ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಎಲ್ಲಾ 9 ಸಂಘಟನೆಗಳ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಸಂಘಟನೆಗಳ ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ‌.

1969 ರಲ್ಲಿ 14 ಹಾಗೂ 1980 ರಲ್ಲಿ ಇನ್ನೂ 6 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ನಮ್ಮ ದೇಶದಲ್ಲಿ ಜುಲೈ 19 ನ್ನು ಬ್ಯಾಂಕ್ ರಾಷ್ಟ್ರೀಕರಣ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. 1975 ರಲ್ಲಿ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ಇಂತಹ ಬ್ಯಾಂಕುಗಳನ್ನು ಸ್ಥಾಪಿಸಿದ ಉದ್ದೇಶ ಅತೀ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರ ಉಳಿತಾಯದ ಹಣವನ್ನು ಸಂಗ್ರಹಿಸಿ, ಅವರ ಹಣಕ್ಕೆ ಭದ್ರತೆ ಮತ್ತು ಬಡ್ಡಿಯನ್ನು ನೀಡಿ,  ತನ್ಮೂಲಕವಾಗಿ ಅತೀ ಹೆಚ್ಚು ಉತ್ಪಾದಕರಿಗೆ ಸಾಲ ಸೌಲಭ್ಯವನ್ನು ಒದಗಿಸುವುದಾಗಿದೆ.

ಬ್ಯಾಂಕ್ ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ ಬ್ಯಾಂಕುಗಳ ಮುಳುಗುವಿಕೆ/ಮುಚ್ಚುವಿಕೆ ಸರ್ವೇ ಸಾಮಾನ್ಯವಾಗಿತ್ತು. 1947 ರಿಂದ 1969 ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕುಗಳು ಬಾಗಿಲು ಮುಚ್ಚಿದ್ದವು. ಈ ಬ್ಯಾಂಕುಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಠೇವಣಿಯಾಗಿಟ್ಟಿದ್ದ ಜನ ಸಾಮಾನ್ಯರು ಹೆಚ್ಚು ಕಡಿಮೆ ತಮ್ಮೆಲ್ಲ ಕಷ್ಟಾರ್ಜಿತ ಉಳಿತಾಯದ ಹಣವನ್ನು ಕಳೆದುಕೊಂಡರು. ಜನರು ಈ ಬ್ಯಾಂಕುಗಳ ಮೇಲಿಟ್ಟಿದ್ದ ವಿಶ್ವಾಸ, ನಂಬಿಕೆಗೆ ಧಕ್ಕೆಯುಂಟಾಯಿತು. ಬ್ಯಾಂಕ್ ರಾಷ್ಟ್ರೀಕರಣದ ತರುವಾಯ ಕೂಡಾ ಇದುವರೆಗೂ 38 ಖಾಸಗಿ ಬ್ಯಾಂಕುಗಳು ಮುಳುಗಿವೆ‌.

ಗ್ಲೋಬಲ್ ಟ್ರಸ್ಟ್ ಬ್ಯಾಂಕ್, ಸೆಂಚುರಿಯನ್ ಬ್ಯಾಂಕ್, ಟೈಮ್ಸ್ ಬ್ಯಾಂಕ್, ಬ್ಯಾಂಕ್ ಆಪ್ ಪಂಜಾಬ್, ಲಕ್ಷ್ಮೀ ವಿಲಾಸ ಬ್ಯಾಂಕುಗಳು ಇದರಲ್ಲಿ ಸೇರಿವೆ‌. ಆದರೆ ಅದೇ ಸಮಯದಲ್ಲಿ ನಮ್ಮ ದೇಶದ ಸಾರ್ವಜನಿಕ ವಲಯದ ಯಾವುದೇ ಬ್ಯಾಂಕುಗಳು ಮುಳುಗಿಲ್ಲ ಮಾತ್ರವಲ್ಲ, ಮುಳುಗಿ ಹೋಗಿದ್ದ ಖಾಸಗಿ ಬ್ಯಾಂಕುಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡು ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡಿವೆ ಎಂಬುದನ್ನು ಗಮನಿಸಬೇಕು.

2008 ರ ಜಾಗತಿಕ ಬ್ಯಾಂಕಿಂಗ್ ಕುಸಿತದ ಸಂದರ್ಭದಲ್ಲಿ ಸಹ  ಭಾರತದ ಬ್ಯಾಂಕಿಂಗ್ ವಲಯವು ಯಾವುದೇ ಅಪಾಯಕ್ಕೆ ಸಿಲುಕಲಿಲ್ಲ. ಬಲಾಢ್ಯ ಯುರೋಪಿಯನ್ ಮತ್ತು ಅಮೇರಿಕಾದ ಖಾಸಗಿ ಬ್ಯಾಂಕುಗಳು ತರಗಲೆಯಂತೆ ಕುಸಿಯುತ್ತಿದ್ದಾಗ, ಬೊಕ್ಕಸದಿಂದ ಅಪಾರ ಮೊತ್ತದ ಹಣ ನೀಡಿ ಸರಕಾರಗಳೇ ಅವುಗಳನ್ನು ರಕ್ಷಿಸಿದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಅದಕ್ಕೂ ಹಿಂದೆ 1980 ರಲ್ಲಿ ಜಪಾನಿನ, 1990 ರಲ್ಲಿ ಕೊರಿಯಾದ ಮತ್ತು ಇತ್ತೀಚೆಗೆ 2017 ರಲ್ಲಿ ಇಟಲಿಯ ಖಾಸಗಿ ಬ್ಯಾಂಕುಗಳನ್ನು ಅದೇ ರೀತಿ ರಕ್ಷಿಸಲಾಗಿದೆ.

ಇನ್ನು ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳ ಬೆಳವಣಿಗೆಯನ್ನು ಗಮನಿಸಿದಾಗ ನಮ್ಮ ದೇಶದಲ್ಲಿ 1969 ರ ಜೂನ್ ತಿಂಗಳಲ್ಲಿ ಕೇವಲ 8961 ರಷ್ಟಿದ್ದ ಬ್ಯಾಂಕ್ ಶಾಖೆಗಳ ಸಂಖ್ಯೆ 2020 ರಲ್ಲಿ 146904 ಕ್ಕೆ ತಲುಪಿದೆ. 1969 ರಲ್ಲಿ ಕೇವಲ ರೂ.4700 ಕೋಟಿಯಷ್ಟಿದ್ದ ಠೇವಣಿಗಳ ಮೊತ್ತ ಪ್ರಸ್ತುತ 1,47,98,000 ಕೋಟಿಯಷ್ಟಾಗಿದೆ. ಬ್ಯಾಂಕ್ ರಾಷ್ಟ್ರೀಕರಣದ ನಂತರ ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಚಿಕ್ಕ ಮತ್ತು ಮಧ್ಯಮ ರೈತರು, ಕುಶಲ ಕರ್ಮಿಗಳು, ಚಿಕ್ಕ ವ್ಯಾಪಾರಸ್ಥರು, ಸ್ವ ಉದ್ಯೋಗಿಗಳು, ಚಿಲ್ಲರೆ ವ್ಯಾಪಾರಸ್ಥರು ಮತ್ತು ಸಣ್ಣ ಉದ್ಯಮಿಗಳು, ಮಹಿಳೆಯರು, ವಿದ್ಯಾರ್ಥಿಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಹಾಯವನ್ನು ಪಡೆದರು‌. ಆದ್ಯತಾ ವಲಯಗಳಿಗೆ ಸಾಲ ನೀಡುವಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಯಿತು.

ಆರ್ಥಿಕ ಕ್ರಾಂತಿಯ ಮೂಲಕ ದೇಶದಲ್ಲಿ ಬಡತನ ನಿವಾರಣೆ ಹಾಗೂ ಉದ್ಯೋಗ ಸೃಷ್ಠಿಗೆ ದೊಡ್ಡ ಕೊಡುಗೆ ನೀಡಿರುವ ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಿ,  ಅವುಗಳ ಒಡೆತನವನ್ನು ಖಾಸಗಿ ಬಂಡವಾಳಶಾಹಿಗಳಿಗೆ ನೀಡುವ ಹುನ್ನಾರ ಈಗ ನಡೆದಿದೆ. ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆಯಲಾದ ಮಾಹಿತಿಯ ಪ್ರಕಾರ 2019 ರವರೆಗೆ ಕೇವಲ 50 ಜನ ಸಾಲಗಾರರ ರೂ.68607 ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ‌ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ‌. ಇದರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ಮಹಾನುಭಾವರೂ ಇದ್ದಾರೆ‌. ಅಧಿಕೃತವಾಗಿ ಕೆಟ್ಟ ಸಾಲಗಳು ಎಂದು ಪರಿಗಣಿಸಲಾಗಿರುವ ರೂ.450000 ಕೋಟಿಗಳ ಮೊತ್ತದ ಸಾಲ ಕೇವಲ 100 ಅತೀ ದೊಡ್ಡ ಸಾಲಗಾರರಿಗೆ ಸೇರಿದ್ದು ಎಂಬುದನ್ನು ರಿಸರ್ವ್ ಬ್ಯಾಂಕ್ ವರದಿಗಳು ಹೇಳುತ್ತವೆ‌. ಈ ದೊಡ್ಡ ಸಾಲಗಾರರಿಂದ ಸಾಲ ವಸೂಲಿಗೆ ಪರಿಣಾಮಕಾರಿಯಾದ ದಿಟ್ಟ ಪ್ರಯತ್ನ ಮಾಡುವುದರ ಬದಲಾಗಿ ಬ್ಯಾಂಕುಗಳನ್ನು ಇಂಥವರಿಗೆ ಮಾರಾಟ ಮಾಡಿ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡಲಾಗುತ್ತಿದೆ‌. ಬ್ಯಾಂಕುಗಳ ಖಾಸಗಿಕರಣವೆಂದರೆ ನಿಸಂಶಯವಾಗಿಯೂ ದೇಶದ ಹಣಕಾಸು ವಲಯದ ನಿಯ‌ತ್ರಣವನ್ನು ದೇಶ ವಿದೇಶಗಳ ಖಾಸಗಿ ಬಂಡವಾಳಷಾಹಿಗಳ ಕೈಗೊಪ್ಪಿಸುವುದು.

ದೇಶದ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಮಾಡುವುದು, ಜನಸಾಮಾನ್ಯರ ಠೇವಣಿ ಹಣದ ಹಿತಾಸಕ್ತಿಗೆ ಧಕ್ಕೆ ತರುವುದು, ಉದ್ಯೋಗಾವಕಾಶ ಮತ್ತು ಮೀಸಲಾತಿಯಂತಹ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುವಂತದ್ದು, ಬ್ಯಾಂಕ್ ಶಾಖೆಗಳ ಮುಚ್ಚುವಿಕೆ ಮತ್ತು ಜನಸಾಮಾನ್ಯರನ್ನು ಬ್ಯಾಂಕಿಂಗ್ ಸೇವೆಯಿಂದ ಹೊರಗಿಡುವ ಪ್ರಯತ್ನ ಮೊದಲಾದ ಹಲವಾರು ವಿಷಯಗಳನ್ನು ವಿರೋಧಿಸಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ನಡೆಸುತ್ತಿರುವ ಈ ದೇಶಪ್ರೇಮಿ ಹೋರಾಟದಲ್ಲಿ ಅತ್ಯಗತ್ಯವಾಗಿ ಸಾರ್ವಜನಿಕರು, ಬ್ಯಾಂಕ್ ಗ್ರಾಹಕರು, ಆರ್ಥಿಕ ಪರಿಣಿತರು, ಸಂಘ ಸಂಸ್ಥೆಗಳು ಭಾಗಿಯಾಗಬೇಕಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳ ಇರುವಿಕೆಯು ಬ್ಯಾಂಕ್ ಉದ್ಯೋಗಿಗಳಿಗಿಂತ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿದೆ. ಆದ್ದರಿಂದ ಸಾರ್ವಜನಿಕ ಬ್ಯಾಂಕುಗಳನ್ನು ಉಳಿಸಿ ಬೆಳೆಸಿ ದೇಶದ ಆರ್ಥಿಕ ಸಾರ್ವಭೌಮತ್ವವನ್ನು ರಕ್ಷಿಸಲು ಸಾರ್ವಜನಿಕರ ಸಹಕಾರ ಮತ್ತು ಬೆಂಬಲವನ್ನು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾದ ಬಿ.ಆನಂದಮೂರ್ತಿಯವರು ಕೋರಿದ್ದಾರೆ.

ಅಖಿಲ ಭಾರತ ಮುಷ್ಕರದ ಅಂಗವಾಗಿ 15-03-2021 ರ ಸೋಮವಾರ ಬೆಳಿಗ್ಗೆ ದಾವಣಗೆರೆ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಮುಂಭಾಗ ಮತ್ತು 16-03-2021 ರ ಮಂಗಳವಾರ ಬೆಳಿಗ್ಗೆ ದಾವಣಗೆರೆ ಮಂಡಿಪೇಟೆಯ ಕೆನರಾ ಬ್ಯಾಂಕ್ ಮುಂಭಾಗ ಪ್ರತಿಭಟನೆ ಮತ್ತು ಮತಪ್ರದರ್ಶನ ನಡೆಯಲಿದೆ. ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಎಲ್ಲಾ ಸದಸ್ಯರು, ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳು, ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಮಷ್ಕರದ ಎಲ್ಲಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಸರಕಾರದ ಬ್ಯಾಂಕ್ ಖಾಸಗೀಕರಣ ನಡೆಯನ್ನು ಹಿಮ್ಮೆಟ್ಟಿಸಬೇಕಾಗಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top