ಬೆಂಗಳೂರು: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿರುವ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಸಭೆ ಸೇರಿದ 35 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬಂದ್ ತೀರ್ಮಾನ ಕೈಗೊಂಡವು. ಬಂದ್ ಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳು ಬೆಂಬಲಿಸಿವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಹೇಳಿದರು.
ಡಿಸೆಂಬರ್ 31 ರಂದು ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಎಲ್ಲಾ ಚಟುವಟಿಕೆ ಬಂದ್ ಆಗಲಿದೆ. ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಟ್ಯಾಕ್ಸಿ ಮಾಲೀಕರು, ಹೋಟೆಲ್ ಮಾಲೀಕರು, ಶಿಕ್ಷಣ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ಕೈಗಾರಿಕಾ, ಬೀದಿಬದಿ ವ್ಯಾಪರಿಗಳು, ಸಾರಿಗೆ ನೌಕರರು, ಸಿನಿಮಾ, ಅಂಗಡಿ ಮಾಲೀಕರು, ಗಾರ್ಮೆಂಟ್ಸ್ ನೌಕರರು, ಸರ್ಕಾರಿ ನೌಕರರು, ಅಖಿಲ ಭಾರತ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ಸುಮಾರು 35 ಸಂಘಟನೆಗಳಿಂದ ಕರ್ನಾಟಕ ಬಂದ್‌ಗೆ ಬೆಂಬಲ ಸಿಕ್ಕಿದೆ.
ಬಂದ್ ವಿರೋಧಿಸಿದ ಶಿವಕುಮಾರ್ ನಾಯಕ್: ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲು ವಾಟಾಳ್ ನಾಗರಾಜ್ ಕರೆ ನೀಡಿದ ವೇಳೆ ಹೋರಾಟಗಾರ ಶಿವಕುಮಾರ್ ನಾಯಕ್ ವಿರೋಧ ವ್ಯಕ್ತಪಡಿಸಿದರು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಂದ್ ಬೇಡ, ಬೇರೆ ದಿನಾಂಕ ಇರಲಿ ಎಂದು ಹೇಳಿದ್ದಾರೆ. ಆದರೆ, ಇದರಿಂದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಘಟನಾ ಸ್ಥಳದಿಂದ ಶಿವಕುಮಾರ್ ನಾಯಕ್ ಅವರನ್ನು ದೂರಕ್ಕೆ ಕರೆದೊಯ್ದಿದ್ದಾರೆ.
ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸದನದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ, ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ. ಡಿಸೆಂಬರ್ 29ರೊಳಗೆ ಈ ಬಗ್ಗೆ ನಿರ್ಧಾರ ಪ್ರಕಟಿಸಲು ಡೆಡ್ ಲೈನ್ ನೀಡಲಾಗಿದೆ. ಡಿ.31ರಂದು ಸಿನಿಮಾ ಚಿತ್ರೀಕರಣ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಆಗಲಿವೆ ಎಂದು ಸಾ.ರಾ ಗೋವಿಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ಉಪಸ್ಥಿತರಿದ್ದರು.