ಕೊಪ್ಪಳ: 7ನೇ ವೇತನ ಆಯೋಗ ಸಂಪೂರ್ಣವಾಗಿ ತನ್ನ ಕೆಲಸ ಮುಗಿಸಿದೆ. ವರದಿ ಸಲ್ಲಿಸುವ ಹಂತಕ್ಕೆ ಬಂದಿದೆ. ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ನ.16ರೊಳಗೆ ವರದಿ ಕೊಡುವ ವಿಶ್ವಾಸವಿದೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶೇ.40 ರಷ್ಟು ವೇತನ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದೇವೆ. ಮತ್ತೆ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ. ಆಯೋಗದ ಶಿಫಾರಸಿನ ಬಂತರ ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿಯಲ್ಲಿ ಸರ್ಕಾರಿ ನೌಕರರಿಗೆ ವೇತನದ ಸಮಸ್ಯೆ ಆಗಲ್ಲ. ಸರ್ಕಾರ ಮಧ್ಯಂತರವಾಗಿ ಈಗಾಗಲೇ ನಮಗೆ ಶೇ.17ರಷ್ಟು ವೇತನ ಹೆಚ್ಚಿಸಿದೆ. ರಾಜ್ಯದ ಬಜೆಟ್ 3.25 ಲಕ್ಷ ಕೋಟಿ ರೂ. ಇದೆ. ಸರ್ಕಾರಕ್ಕೆ ನೌಕರರ ವೇತನ ದೊಡ್ಡ ಮೊತ್ತವಲ್ಲ. ಹಿಂದಿನ ಸರ್ಕಾರ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದಿತ್ತು. ನಾವು 40 ಪರ್ಸೆಂಟ್ ವೇತನ ಕೇಳಿದ್ದೇವೆ. ಆಯೋಗ ಶಿಫಾರಸು ಮಾಡಿದ ಮೇಲೆ ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ.ಈ ಹಿಂದೆ ಸಿದ್ದರಾಮಯ್ಯ ಅವರು 6ನೇ ವೇತನ ಆಯೋಗಕ್ಕೆ ಶೇ.30ರಷ್ಟು ವೇತನ ಹೆಚ್ಚಳಕ್ಕೆ ಆದೇಶಿಸಿದ್ದರು. ಈಗಲೂ ಸಹ ಕೊಡುತ್ತಾರೆ ಎನ್ನುವ ಭರವಸೆಯಿದೆ ಎಂದರು.
ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯದ ವಿಚಾರ ನನಗೆ ಗೊತ್ತಿಲ್ಲ. ಅವರು ಅಖೀಲ ಭಾರತ ಲಿಂಗಾಯತ ಸಮುದಾಯ ರಾಷ್ಟ್ರೀಯ ಅಧ್ಯಕ್ಷರು, ನಾನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ. ನಮ್ಮಲ್ಲಿ ಎಲ್ಲರೂ ಇರುತ್ತಾರೆ. ಅಂತಹ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಆ ತರಹದ ವಿಷಯ ಗಮನಕ್ಕೆ ಬಂದರೆ ನಾವು ಸರ್ಕಾರದ ಗಮನಕ್ಕೆ ತರುತ್ತೇವೆ. ಅದಕ್ಕೆ ಅವರೇ ಉತ್ತರಿಸಬೇಕು ಎಂದು ಷಡಕ್ಷರಿ ಹೇಳಿದರು.
ಅ.27ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಶೇಷ ಸನ್ಮಾನ ಹಮ್ಮಿಕೊಳ್ಳಲು ಉದ್ದೇಶಿಸಿದೆ. 12-15 ಸಾವಿರ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಸಿಎಂ ಅವರೇ ಉದ್ಘಾಟನೆ ಮಾಡಲಿದ್ದಾರೆ. ಸರ್ಕಾರಿ ನೌಕರರು ಮೃತಪಟ್ಟರೆ ಅವರಿಗೆ ವಿಮೆ ಹೊರತುಪಡಿಸಿ ವೇತನ ಖಾತೆ ಇರುವ ಬ್ಯಾಂಕ್‌ನಲ್ಲಿ ಇನ್ಸೂರೆನ್ಸ್ ಕವರೇಜ್ ಮಾಡುವ ಕುರಿತು ಬ್ಯಾಂಕ್‌ಗಳಿಗೆ ಮಾತನಾಡಿದ್ದೇವೆ. ಸರ್ಕಾರಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡುವ ಕುರಿತು ಸಭೆ ನಡೆದಿದೆ. ಬ್ಯಾಂಕ್‌ನವರು ತಾತ್ವಿಕವಾಗಿ ಒಪ್ಪಿದ್ದಾರೆ, ಅನುಕಂಪದ ನೌಕರಿ ಸ್ಥಗಿತ ಮಾಡಿಲ್ಲ, ಸರ್ಕಾರ ಅದನ್ನು ಮಾಡಿಯೇ ಮಾಡುತ್ತದೆ ಎಂದರು.