ಬೆಂಗಳೂರು: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಾಳೆಯಿಂದ (ಮಾರ್ಚ್ 01ರಿಂದ) ಸಾಮೂಹಿಕ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ನಾಳೆಯುಂದ ಎಲ್ಲಾ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.
ಈ ಬಗ್ಗೆ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ 7ನೇ ವೇತನ ಆಯೋಗ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ನಾಳೆಯಿಂದ(ಮಾ.01) ಸಾಮೂಹಿಕವಾಗಿ ಸರ್ಕಾರಿ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್ ಆಗುತ್ತವೆ.
ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಸ್ವಾಗತಿಸುತ್ತೇವೆ. ಯಾವುದೇ ಸಂಧಾನಕ್ಕೆ ನಾವು ಬಗ್ಗುವುದಿಲ್ಲ. 7ನೇ ವೇತನ ಆಯೋಗ ವರದಿ ಜಾರಿಯಾದ್ರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಳೆದ 1ವರ್ಷದಿಂದ ಸಿಎಂ ವೇತನ ಪರಿಷ್ಕರಣೆ ಭರವಸೆ ನೀಡಿದ್ದರು. ಆದರೆ ಈ ವರೆಗೆ ಸಿಎಂ ಭರವಸೆ ಈಡೇರಿಲ್ಲ. ವೇತನ ಆಯೋಗ ಪರಿಶೀಲನೆ ಭರವಸೆ ನೀಡಿದೆ. ನಾವು ಸರ್ಕಾರಕ್ಕೆ ಪ್ರತಿಭಟನೆ ಬಗ್ಗೆ ತಿಳಿಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಸ್ಪಂದಿಸಿಲ್ಲ. ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದೇವೆ. ಸಂಘದ ಎಲ್ಲಾ ಸದಸ್ಯರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇಡೀ ದೇಶದಲ್ಲಿ ಕಡಿಮೆ ಕನಿಷ್ಟ ವೇತನ ಪಡೆಯುವವರು ಕರ್ನಾಟಕ ರಾಜ್ಯದವರು. ಬೇರೆ ರಾಜ್ಯಗಳಲ್ಲಿ ವೇತನ ಹೆಚ್ಚಾಗಿದೆ. ಇಂದು 39% ಹುದ್ದೆ ಖಾಲಿ ಇದೆ. ಇಷ್ಟೆಲ್ಲ ಕೆಲಸ ಮಾಡಿ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷ ರುದ್ರಪ್ಪ, ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ, ರಾಜ್ಯ ಸರ್ಕಾರಿ ಶಾಲಾ ಕಾಲೇಜುಗಳು ಸಂಘದ ಅಧ್ಯಕ್ಷ ಶಂಭುಲಿಂಗ ಗೌಡ ಇದ್ದರು.



