ಬೆಂಗಳೂರು: ಸಿಎಂ ತವರು ಕ್ಷೇತ್ರ ಹಾನಗಲ್ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ನ ಶ್ರೀನಿವಾಸ್ ಮಾನೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಶ್ರೀನಿವಾಸ ಮಾನೆ, ನಾನು ಅವರು ಒಂದೇ ಕ್ಷೇತ್ರದಿಂದ ಬಂದಿದ್ದೇವೆ. ಅನೇಕ ವರ್ಷಗಳಿಂದ ಅವರ ಜೊತೆ ಆತ್ಮೀಯವಾಗಿದ್ದೇನೆ. ನಾನು ಗೌರವಿಸುವ ವ್ಯಕ್ತಿಗಳಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಹಾನಗಲ್ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.
ಸಿಎಂ ಭೇಟಿಯಾಗಿದ್ದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗೋದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು , ರಾಜಕಾರಣವೇ ಬೇರೆ ಆಡಳಿತವೇ ಬೇರೆ. ನನ್ನ ಭೇಟಿಯ ವಿಚಾರವೇ ಬೇರೆ. ಶಾಸಕನಾಗಿ ಸಿಎಂ ಭೇಟಿಯಾಗುವುದು ನನ್ನ ಕರ್ತವ್ಯ. ಕ್ಷೇತ್ರದ ಅಭಿವೃದ್ಧಿಯಾಗಬೇಕು, ಅದಕ್ಕೆ ಭೇಟಿಯಾಗಿದ್ದೇನೆ ಎಂದರು.



