ಬೆಂಗಳೂರು: ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಭರವಸ ನಂಬಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಆರು ತಿಂಗಳ ಅವಧಿಯವರೆಗೆ ತಾತ್ಕಾಲಿಕ ಕೈ ಬಿಟ್ಟಿದ್ದೇವೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇನ್ನು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಾದಯಾತ್ರೆ ಹರಿಹರ ತಲುಪಿದಾಗ ಅವರು ಬಂದರು. ಬೆಂಗಳೂರಿನಲ್ಲಿ ಸಮಾವೇಶ ಮುಗಿದ ತಕ್ಷಣ ಹೋದರು. ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ಅವರು ಸೆಲೆಬ್ರಿಟಿ ರೀತಿ, ಬರ್ತಾರೆ ಹೋಗತ್ತಾರೆ. ಆದರೆ, ನಮ್ಮ ಹೋರಾಟ ನಿರಂತರ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಆರು ತಿಂಗಳ ಕಾಲಾವಕಾಶ ಕೇಳಿದ್ದು, ಮಾರ್ಚ್ 15ರಂದು ಹೋರಾಟ ಸ್ಥಗಿತಗೊಳಿಸಿದ್ದೇವೆ. ಸೆಪ್ಟೆಂಬರ್ 15ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು. ಆ ವೇಳೆಗೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ ಶುರು ಮಾಡುತ್ತೇವೆ ಎಂದರು.
ಸಂಕ್ರಾಂತಿ ಹಬ್ಬದಂದು ಕೂಡಲ ಸಂಗಮದಿಂದ ಆರಂಭವಾದ ಪಾದಯಾತ್ರೆ ಬೆಂಗಳೂರಿನವರೆಗೂ ಯಶಸ್ವಿಯಾಗಿದೆ. 2ಎ ಮೀಸಲಾತಿ ನೀಡುವಂತೆ ಸಮಾವೇಶದಲ್ಲಿ ಮಂಡಿಸಲಾಗಿದೆ. 23 ದಿನಗಳ ಧರಣಿ ಸತ್ಯಾಗ್ರಹವೂ ನಡೆದಿದೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನುಬದ್ಧವಾಗಿ ಮೀಸಲಾತಿ ಕಲ್ಪಿಸಬೇಕಾದರೆ ಆರು ತಿಂಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ಹೇಳಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ವಿಧಾನ ಮಂಡದಲ್ಲಿ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕ ಹಿನ್ನೆಲೆ ಹೋರಾಟ ನಿಲ್ಲಿಸಿದ್ದೇವೆ ಎಂದರು.
ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸೆಪ್ಟೆಂಬರ್ 15ರೊಳಗೆ ಮೀಸಲಾತಿ ದೊರಕದಿದ್ದರೆ ಮತ್ತೆ ಬೆಂಗಳೂರಿನಲ್ಲಿ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದರು.ಮಾಜಿ ಸಚಿವ ಎ.ಬಿ. ಪಾಟೀಲ, ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ನಾನಾಗೌಡ ಬಿರಾದಾರ್ ಇದ್ದರು.



