ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (KSRTC) ಕೆಲಸ ಕೊಡಿಸುವುದಾಗಿ ಸುಮಾರು 500ಕ್ಕೂ ಅಧಿಕ ಜನರಿಗೆ 18 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಎಸ್ ಆರ್ ಟಿಸಿಯಲ್ಲಿ ಡ್ರೈವರ್ ಕೆಲಸ ಮಾಡ್ತಿದ್ದ ಮಂಜುನಾಥ್, ನಡವಳಿಕೆ ಸರಿಯಿಲ್ಲದ ಕಾರಣ ಕೆಲಸದಿಂದ ವಜಾಗೊಳ್ಳಿಸಲಾಗಿತ್ತು. ನಂತರ ಆತ ಕೆಎಸ್ ಆರ್ ಟಿಸಿಯಲ್ಲಿ ಕೆಲಸ ಕೊಡಿಸೊದಾಗಿ ಹೇಳಿ ನೂರಾರು ಮಂದಿಗೆ ವಂಚನೆ ಮಾಡಿ ಇದೀಗ ಮಾಗಡಿ ರೋಡ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಈತನ ಜೊತೆಗೆ ಅನಿಲ್ ಎಂಬಾತನನ್ನು ಕೂಡ ಬಂಧಿಸಲಾಗಿದೆ.
ತನ್ನ ಕಾರ್ ಗೆ ಕರ್ನಾಟಕ ಸರ್ಕಾರ ಅಂತ ನಾಮಫಲಕ ಹಾಕಿಕೊಂಡು ಓಡಾಡಿಕೊಂಡಿದ್ದ ಮಂಜುನಾಥ್, ಕೆಎಸ್ ಆರ್ ಟಿಸಿಯಲ್ಲಿ ನಿರ್ವಾಹಕ, ಚಾಲಕ ಸೇರಿ ವಿವಿಧ ಹುದ್ದೆಗಳ ಆಮಿಷವೊಡ್ಡಿ ಸುಮಾರು 500 ಜನರಿಂದ 18 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ.
ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ ಸುತ್ತಲಿನ ಜನರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ಜನರಿಗೆ ವಂಚಿಸಲು 100ಕ್ಕೂ ಹೆಚ್ಚು ಸಿಮ್ ಮತ್ತು ಹತ್ತಾರು ಮೊಬೈಲ್ ಬಳಕೆ ಮಾಡಿದ್ದರು. ತನ್ನ ಅಕೌಂಟ್ ಗೆ ಹಣ ಹಾಕಿಸಿಕೊಂಡರೆ, ಐಟಿ ಇಲಾಖೆಯಿಂದ ಸಮಸ್ಯೆ ಆಗಲಿದೆ ಎಂದು ತನ್ನ ಶಿಷ್ಯ ಅನಿಲ್ ಅಕೌಂಟ್ ಗೆ ಹಾಕಿಸಿಕೊಂಡು, ಡ್ರಾ ಮಾಡಿಸಿಕೊಳ್ಳುತ್ತಿದ್ದ. ಅದಕ್ಕೆ ಶಿಷ್ಯ ಅನಿಲ್ ಗೆ ಕಮಿಷನ್ ಕೂಡ ಕೊಡಲಾಗುತ್ತಿದ್ದ ಎಂದು ತನಿಖಯಲ್ಲಿ ತಿಳಿದು ಬಂದಿದೆ.
ವಂಚನೆ ಮಾಡಿರುವ ಹಣ ಎಲ್ಲಿದೆ ಎಂದು ಪೊಲೀಸರು ಕೇಳಿದ್ರೆ, ಅಧಿಕಾರಿಗಳ ಬಳಿ ಕೊಟಟಿದ್ದೇನೆ ಎಂದು ಹೇಳುತ್ತಿದ್ದು, ಈ ಕೃತ್ಯಕ್ಕೆ ಅಧಿಕಾರಿಗಳು ಕೈಜೋಡಿಸಿದ್ದರಾ ..? ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.



