ದಾವಣಗೆರೆ: ಏಷ್ಯಾ ಖಂಡದ 2ನೇ ಅತಿ ದೊಡ್ಡ ಸೂಳೆಕೆರೆ ಸರ್ವೇ ವರದಿ, ಒತ್ತುವರಿ ತೆರವು ಕ್ರಮಗಳ ಬಗ್ಗೆ ಹತ್ತು ದಿನಗಳಲ್ಲಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದರೆ ಹೈಕೋರ್ಟ್ ನಲ್ಲಿ ದೂರು ದಾಖಲಿಸಲಾಗುವುದು ಎಂದು ಖಡ್ಗ ಸಂಘ, ಶಾಂತಿಸಾಗರ ಸಂರಕ್ಷಣಾ ಮಂಡಳಿ ಎಚ್ಚರಿಕೆ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಡ್ಗ ಸಂಘದ ಅಧ್ಯಕ್ಷ ರಘು ಬಿ.ಆರ್, ನಮ್ಮ ಸಂಘದ ಹೋರಾಟದ ಭಾಗವಾಗಿ ಕರ್ನಾಟಕ ನೀರಾವರಿ ನಿಗಮವು ಖಾಸಗಿ ಏಜೆನ್ಸಿಯಿಂದ ಸೂಳೆಕೆರೆಯ ಸರ್ವೇ ಮಾಡಿಸಿದೆ. ಆದರೆ, ಸರ್ವೇ ವರದಿ ಎಲ್ಲಿದೆ ಎಂಬುದರ ಬಗ್ಗೆ ಯಾರೂ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಹತ್ತು ದಿನಗಳ ಒಳಗಡೆ ಸರ್ವೇ ವರದಿ ಬಹಿರಂಗ ಪಡಿಸಿ, ಕೆರೆಯ ಒತ್ತುವರಿ ತೆರವು, ಹೂಳು ಎತ್ತಿಸುವುದು, ಜಮೀನು ಮುಳಗಡೆ ಆದವರಿಗೆ ಪರಿಹಾರ ವಿತರಿಸಬೇಕು. ಇಲ್ಲವೇ ಎಲ್ಲಾ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು ಎಷ್ಟು ದಿನಗಳ ಒಳಗೆ ಬಗೆ ಹರಿಸುತ್ತಾರೆ ಎಂಬುದನ್ನು ತಿಳಿಸಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಸೇರಿದಂತೆ ಈ ವರೆಗೂ ಕಾರ್ಯನಿರ್ವಹಿಸಿರುವ ನಾಲ್ವರು ಜಿಲ್ಲಾಧಿಕಾರಿಗಳು ಮತ್ತು ಕರ್ನಾಟಕ ನೀರಾವರಿ ನಿಗಮದಲ್ಲಿಈ ವರೆಗೆ ಮುಖ್ಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿರುವ ಮೂವರು ಎಂಜಿನಿಯರ್‌ಗಳ ವಿರುದ್ಧ ಹೈಕೋರ್ಟ್ ನಲ್ಲಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಚಂದ್ರಹಾಸ ಬಿ, ಷಣ್ಮುಖಯ್ಯ ಕೆ, ಸೈಯದ್ ನಯಾಜ್, ಮೊಹಮ್ಮದ್ ಶಬ್ಬೀರ್, ಅಣ್ಣಪ್ಪ ಕೆ.ಎಸ್. ಹಾಜರಿದ್ದರು.



