ಬೆಂಗಳೂರು: ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ರಫ್ತು ಮಾಡಿಕೊಳ್ಳುತ್ತಿದ್ದ ಕುಖ್ಯಾತ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ಹ್ಯಾಕರ್ ನಿಂದ 9 ಕೋಟಿ ರೂ.ಮೌಲ್ಯದ 31 ಬಿಟ್ ಕಾಯಿನ್ (ಕ್ರಿಪ್ಟೋ ಕರೆನ್ಸಿ)ಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಯನಗರ ನಿವಾಸಿಯಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (25)ಯ ವಿಚಾರಣೆ ಮುಂದುವರಿದಿದ್ದು, ಅಂತಾರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಗಳನ್ನು , ಬೇರೆ ಬೇರೆ ದೇಶದ ವಿವಿಧ ಪೋಕರ್ ಗೇಮ್ ವೆಬ್ ಸೈಟ್ ಗಳನ್ನು ಮತ್ತು ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್ , ವೈಎಫ್‌ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶ್ರೀಕೃಷ್ಣ ತನ್ನ ಸಹಚರರಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಹೇಮಂತ್ ಮುದ್ದಪ್ಪ, ರಾಬಿನ್ ಖಂಡೇಲ್ ವಾಲ್ ಹಾಗೂ ಇತರರೊಂದಿಗೆ ಸೇರಿಕೊಂಡು ಅಕ್ರಮವಾಗಿ ಹಣ ಪಡೆಯುವ ಉದ್ದೇಶದಿಂದ ದೇಶದ ಹಾಗೂ ಬೇರೆ ಬೇರೆ ದೇಶಗಳ ಪೋಕರ್ ಗೇಮಿಂಗ್ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದರು. ಡೇಟಾವನ್ನು ಕಳವು ಮಾಡಿ, ಆ ಡೇಟಾವನ್ನು ತಮ್ಮ ಗೇಮಿಂಗ್ ವೆಬ್ ಸೈಟ್ ಉಪಯೋಗಿಸಿಕೊಳ್ಳುವ ಪ್ರವೃತ್ತಿ ಹೊಂದಿದ್ದಾನೆ.



