ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕರಿಗೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ದಾರೆ. ವಿಸ್ತರಣೆ ಬಗ್ಗೆ ಅಸಮಾಧನವಿದ್ದರೆ ದೆಹಲಿ ಹೋಗಿ ವರಿಷ್ಟರಿಗೆ ದೂರು ನೀಡಲಿ. ಇದಕ್ಕೆ ನನ್ನ ಅಭ್ಯಂತರವೇನಿಲ್ಲ ಎಂದು ಭಿನ್ನಮತಿಯರಿಗೆ ನೇರವಾಗಿ ಸವಾಲು ಹಾಕಿದ್ದಾರೆ.
ದಾವಣಗೆರೆಗೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗತೆ ಅಸಮಾಧಾನವಿದ್ದರೆ ದೆಹಲಿಗೆ ಹೋಗಿ ದೂರು ಕೊಡಲಿ. ಅವರನ್ನು ತಡೆಯುವವರು ಯಾರು ಎಂದು ಪ್ರಶ್ನಿಸಿದರು. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಹಾದಿಬೀದಿಯಲ್ಲಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬೇಡಿ. ದೆಹಲಿಗೆ ಹೋದರೆ ಹೋಗಲಿ. ಎಲ್ಲವನ್ನು ವರಿಷ್ಟರು ನೋಡಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಭಿನ್ನಮತೀಯರಿಗೆ ಎಚ್ಚರಿಕೆ ಕೊಟ್ಟರು. ವರಿಷ್ಟರು ಕೊಟ್ಟ ಸೂಚನೆಯಂತೆ ಸಂಪುಟ ವಿಸ್ತರಣೆ ಮಾಡಲಾಗಿದೆ. ಯಾರನ್ನೂ ಕೂಡ ಕಡೆಗಣಿಸಿಲ್ಲ ಎಂದರು.
ಹಾದಿಬೀದಿಯಲ್ಲಿ ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದು ಅಂದುಕೊಂಡಿದ್ದಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡಬಾರದು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವರಿಷ್ಟರೇ ತೀರ್ಮಾನಿಸುತ್ತಾರೆ. ಬಸವನಗೌಡ ಪಾಟೀಲ್ ಯತ್ನಾಳ್ ಅಂತಹವರು ಎಲ್ಲಾ ಪಕ್ಷದಲ್ಲೂ ಇದ್ದೇ ಇರುತ್ತಾರೆ. ನಾನು ಅದಕ್ಕೆ ಹೆಚ್ಚು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿ ದಾವಣಗೆರೆಯತ್ತ ಪ್ರಯಾಣಿಸಿದರು.
ಸಂಪುಟ ವಿಸ್ತರಣೆ ಬಗ್ಗೆ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಅರವಿಂದ್ ಬೆಲ್ಲದ್, ಸಿದ್ದು ಸವದಿ, ಎಸ್.ಎ.ರಾಮದಾಸ್, ಅಭಯ್‍ಪಾಟೀಲ್, ಕೆ.ಜೆ.ಬೋಪಯ್ಯ, ಶಿವನಗೌಡ ನಾಯಕ್, ರಾಜುಗೌಡ ನಾಯಕ್ ಸೇರಿದಂತೆ ಅನೇಕ ಶಾಸಕರು ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಸಿಎಂ ಹಾಗೂ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿದ್ದರು.



