ದಾವಣಗೆರೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಮಿಶ್ರತಳಿ ಹಸು ಘಟಕ ಹಾಗೂ ಅಮೃತ ಧಾರೆ ಯೋಜನೆಯಡಿ ಹೋರಿಕರುಗಳನ್ನು ನೀಡುವ ಗುರಿ ಹೊಂದಿದ್ದು, ಆಸಕ್ತ ಫಲಾನುಭವಿಗಳು ನಿಗದಿತ ಅವಧಿಯೊಳಗಾಗಿ ಅರ್ಜಿ ಸಲ್ಲಿಸಬಹುದು.
ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಜಿಲ್ಲೆಗೆ ಸಾಮಾನ್ಯ ವರ್ಗ-77, ಪರಿಶಿಷ್ಟ ವರ್ಗ-15 ಹಾಗೂ ಪರಿಶಿಷ್ಟ ಪಂಗಡದ 07 ಫಲಾನುಭವಿಗಳಿಗೆ ಒಂದು ಮಿಶ್ರತಳಿ ಹಸು ಘಟಕ ಸ್ಥಾಪಿಸಲು ಸಹಾಯ ಧನ ನೀಡುವ ಗುರಿ ನೀಡಲಾಗಿದ್ದು ವಿಧಾನಸಭಾ ಕ್ಷೇತ್ರವಾರು ಗುರಿಗಳನ್ನು ಮರುನಿಗದಿಪಡಿಸಲಾಗಿದೆ. ಆಸಕ್ತರು ಅ.2 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಗೆ ಒಟ್ಟು 62000 ರೂ. ಘಟಕ ವೆಚ್ಚವಿದ್ದು, ಸಹಾಯಧನ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ರೂ.15500 (ಬ್ಯಾಂಕ್ ಸಾಲ ಅಥವಾ ಫಲಾನುಭವಿ ವಂತಿಕೆ ರೂ.46500), ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.20665 (ಬ್ಯಾಂಕ್ ಸಾಲ ಅಥವಾ ಫಲಾನುಭವಿ ವಂತಿಕೆ ರೂ.41335) ಸಹಾಯಧನ ನೀಡಲಾಗುವುದು.
ಅಮೃತ ಧಾರೆ ಯೋಜನೆಯಡಿ ಅಜ್ಜಂಪುರ ಅಮೃತ ಮಹಲ್ ಕಾವಲ್‍ನಲ್ಲಿ ಹೆಚ್ಚುವರಿಯಾಗಿರುವ ಅಮೃತ ಮಹಲ್ ಹೋರಿಕರುಗಳನ್ನು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ರೈತರಿಗೆ ನೇರವಾಗಿ ವಿತರಿಸಲಾಗುವುದು. ತಾಲ್ಲೂಕುವಾರು 7 ರಂತೆ ಗುರಿ ನಿಗದಿ ಪಡಿಸಲಾಗಿದ್ದು, ಜಿಲ್ಲೆಯಲ್ಲಿ 42 ಹೋರಿಕರುಗಳನ್ನು ವಿತರಿಸಲಾಗುವುದು. ಆಸಕ್ತರು ಅ.2 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ವಿಧಾನಸಭಾ ಕ್ಷೇತ್ರವಾರು ಶಾಸಕರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ತಾಲ್ಲೂಕುವಾರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರರ ದೂರವಾಣಿ ಸಂಖ್ಯೆ: ಡಾ.ಇಫ್ತೀಕರ್ ಅಲಿ, ಚನ್ನಗಿರಿ -9902905357, ಡಾ.ಜಗದೀಶ್.ಪಿ.ವಿ, ದಾವಣಗೆರೆ -9448005250, ಡಾ.ನಂದ.ಎಸ್.ಎಲ್, ಹರಿಹರ-8073900950, ಡಾ.ಬಾಬುರತ್ನ, ಹೊನ್ನಾಳಿ-9448170225, ಡಾ.ಚಂದ್ರಶೇಖರ್ ಹೊಸಮನಿ, ನ್ಯಾಮತಿ-9632916450, ಡಾ.ಲಿಂಗರಾಜ್.ಕೆ.ಬಿ, ಜಗಳೂರು-9901641942 ಇವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.