ಬೆಂಗಳೂರು: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಸಂಪುಟ ವಿಸ್ತರಣೆ ಅಸಮಾಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಬಿಜೆಪಿ ಚಾಣಕ್ಯ ಅಮಿತ್ ಶಾ, ಅಸಮಾಧಾನ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಾರಿ ಬಿ.ಎಸ್. ಯಡಿಯೂರಪ್ಪ ಸಹ ಹೈ ಕಮಾಂಡ್ ನನ್ನ ಜೊತೆಗೆ ಇದ್ದು, ಅಸಮಾಧಾನಿತರು ಹೈಕಮಾಂಡ್ ಭೇಟಿ ಮಾಡಿ ದೂರು ನೀಡಲಿ ಎಂದು ಹೇಳಿದ್ದರು. ಸಿಎಂ ಈ ರೀತಿ ಹೇಳುತ್ತಲೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ನೂತನ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಇದೀಗ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದು, ಎಲ್ಲ ಅಸಮಾಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ರಾಜಕೀಯ ಲೆಕ್ಕಾಚಾರವನ್ನು ಅಳೆದು ತೂಗಿ ಅಮಿತ್ ಶಾ ಅಂತಿಮವಾಗಿ ಸಚಿವರ ಪಟ್ಟಿ ಒಪ್ಪಿದ ನಂತರವೇ ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರಿಂದ ಸಿಎಂ ಯಡಿಯೂರಪ್ಪ ತುಂಬಾ ವಿಶ್ವಾಸದಿಂದ ಇದ್ದಾರೆ. ಅಮಿತ್ ಶಾ ನಾಳೆ ರಾಜ್ಯಕ್ಕೆ ಭೇಟಿ ನೀಡುವ ಹಿನ್ನೆಲೆ ಎಲ್ಲಾ ಅಸಮಾಧಾನ ತಣ್ಣಗಾಗುವ ಸಾಧ್ಯತೆ ಹೆಚ್ಚಾಗಿದೆ.

ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ನಾಳೆ ನಡೆಯುವ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್‍ಹಾಲ್ ಮತ್ತಿತರ ಕಡೆಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.
ವಿಧಾನಸೌಧದ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು. ವಿಧಾನಸೌಧದ ಮುಂಭಾಗದ ತುರ್ತು ಸ್ಪಂದನಾ ಬೆಂಬಲ ವಾಹನಗಳಿಗೆ ಚಾಲನೆ ನೀಡುವರು. ಬಾಂಕ್ವೆಟ್ ಹಾಲ್‍ನಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿವಿಧೆಡೆ ನಿರ್ಮಿಸಿರುವ ವಸತಿ ಗೃಹಗಳನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಎರಡೂ ಸ್ಥಳಗಳಲ್ಲಿ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲ್ ಮತ್ತು ವಿಧಾನಸೌಧದ ಮೆಟ್ಟಿಲುಗಳನ್ನು ಅಲಂಕರಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ವಿಧಾನಸೌಧ ಪ್ರವೇಶಿಸುವ ಎಲ್ಲ ದ್ವಾರಗಳಲ್ಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.



