ಡಿವಿಜಿ ಸುದ್ದಿ, ಹರಪನಹಳ್ಳಿ: ಸ್ಥಳೀಯ ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ(ಮಹಿಳೆ)ಗೆ ಮೀಸಲಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಕಾರಕ್ಕೇರಲು ಕಾಂಗ್ರೆಸ್ , ಬಿಜೆಪಿ ನರುವೆ ಬಿಗ್ ಫೈಟ್ ಏರ್ಪಟ್ಟಿದೆ.
ಪುರಸಭೆಯ ಒಟ್ಟು 27 ಸದಸ್ಯರ ಪೈಕಿ ಕಾಂಗ್ರೆಸ್ 14, ಬಿಜೆಪಿ 10 , ಜೆಡಿಎಸ್ 01, ಪಕ್ಷೇತರ 2 ಸದಸ್ಯರು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಚಿತ್ತಾರಗೇರಿ ವಾರ್ಡ್ ನ ಎಸ್.ಜಾಕೀರ ಹುಸೇನ್, ಸಂಡೂರಗೇರಿ ವಾರ್ಡ್ ನ ಭರತೇಶ್, ಕುರುಬರಗೇರಿ ವಾರ್ಡ್ ಗಣೇಶ್, ಸುಣ್ಣಗಾರಗೇರಿ ವಾರ್ಡ್ ಲಾಟಿದಾದಪೀರ್ ಹಾಗೂ ಪಕ್ಷೇತರ ಅಭ್ಯರ್ಥಿ ಹಿಪ್ಪಿತೋಟ ವಾರ್ಡ್ ನ ಡಿ.ಅಬ್ದುಲ್‌ರಹಿಮಾನ್ ರೇಸ್‌ನಲ್ಲಿದ್ದಾರೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿರುವ ಬಾಣಗೆರೆ ವಾರ್ಡ್ನ ನಿಂಗಮ್ಮ, ಗುಂಡಿನಕೇರಿ ವಾರ್ಡ್ ತಳವಾರ ಲಕ್ಕಮ್ಮ, ಪಕ್ಷೇತರ ಅಭ್ಯರ್ಥಿಯಾಗಿರುವ ಕೊರವರಗೇರಿ ಹನುಮಕ್ಕ ಉಪಾಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಬಾಪೂಜಿ ನಗರ ವಾರ್ಡ್ ಹಾರಾಳು ಅಶೋಕ್, ಗೌಳೇರ ಓಣಿ ವಾರ್ಡ್ನ ಗೌಳೇರ ವಿನಯಕುಮಾರ್, ತೆಲಗುರ ಓಣಿ ವಾರ್ಡ್ ಜಾವೀದ್, ಬ್ರೂಸ್‌ಪೇಟೆ ವಾರ್ಡ್ ಇಜಂತಕರ್ ಮಂಜುನಾಥ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ವಾಲ್ಮೀಕಿ ನಗರ ವಾರ್ಡ್ ಭೀಮವ್ವ ಏಕ ಮಾತ್ರ ಸದಸ್ಯೆಯಾಗಿದ್ದಾರೆ.

ಪುರಸಭೆ ಚುನಾವಣೆ ಪೂರ್ವದಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿತ್ತು. ಕಳೆದ ನಾಲ್ಕೈದು ತಿಂಗಳ ಹಿಂದೆ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಪ್ರಕಟವಾಗಿತ್ತು. ಇದೀಗ ಹಿಂದುಳಿದ ವರ್ಗ(ಅ)ಕ್ಕೆ ಮೀಸಲಾಗಿರುವುದರಿಂದ ಬಿಜೆಪಿ-ಕಾಂಗ್ರೆಸ್ ನೇರಾ ಫೈಟ್ ಗೆ ಇಳಿದಿವೆ.
ಬಿಜೆಪಿ ಪಕ್ಷ 10 ಸ್ಥಾನ ಹೊಂದಿದ್ದರೂ ಸಹ ಶಾಸಕರು, ಸಂಸದರು ಮತದಾನ ಮಾಡುವ ಅಧಿಕಾರ ಹೊಂದಿರುವುದರಿಂದ ಒಟ್ಟು ಸಂಖ್ಯಾ ಬಲ 12 ಹೊಂದಿದೆ. ಪಕ್ಷೇತರರು-2, ಜೆಡಿಎಸ್-1 ಸ್ಥಾನವಿದೆ. ಕಾಂಗ್ರೆಸ್ 14 ಸದಸ್ಯರನ್ನು ಹೊಂದಿದ್ದರೂ ಸಹ ನಾಲ್ಕೈದು ಜನ ಸದಸ್ಯರು ಪಕ್ಷದ ಉಸ್ತುವಾರಿ ರಾಜಕಾರಣದ ಮೇಲೆ ಮುನಿಸಿಕೊಂಡು ತಟಸ್ಥರಾಗಿದ್ದಾರೆ. ಕೆಲವರು ಬಂಡಾಯ ಅಭ್ಯರ್ಥಿಯಾಗಿ ಜಯ ದಾಖಲಿಸಿದ್ದಾರೆ.
ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮತ್ತು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ ಎಂ.ವಿ.ಅಂಜಿನಪ್ಪ ಬಳಗದಲ್ಲಿ ಕೆಲವು ಸದಸ್ಯರು ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಪಾಳೆಯಲ್ಲಿ ಗುಂಪುಗಾರಿಕೆ ಶುರುವಾಗಿದೆ. ಪಿ.ಟಿ.ಪರಮೇಶ್ವರನಾಯ್ಕ ಮೇಲೆ ಮುನಿಸಿಕೊಂಡಿರುವ ಸದಸ್ಯರು ಮತ್ತು ಪಕ್ಷೇತರ ಸದಸ್ಯರ ನಿರ್ಧಾರದ ಮೇಲೆ ಕಾಂಗ್ರೆಸ್ ಭವಿಷ್ಯ ನಿರ್ಧಾರವಾಗಲಿದೆ.



