ಡಿವಿಜಿ ಸುದ್ದಿ, ಬಳ್ಳಾರಿ: ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಸಂದರ್ಭದಲ್ಲಿ ತೋಳು ತಟ್ಟಿ ಜಗಳಕ್ಕೆ ಬಂದಿದ್ದ ಶಾಸಕ ಭೀಮಾನಾಯ್ಕ್ ವರ್ತನೆ ಖಂಡಿಸಿ ಬಿಜೆಪಿ ಪಕ್ಷದ ನಾಯಕರು ಪ್ರತಿಭಟಿಸಿ ಶಾಸಕ ಭೀಮಾನಾಯ್ಕ್ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಾಸಕರ ದೌರ್ಜನ್ಯ ಮಿತಿಮೀರಿದೆ ಎಂದು ಆಕ್ರೋಶ ವ್ಯ್ಕಪಡಿಸಿದರು. ಇತ್ತೀಚೆಗೆ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ತೋಳು ತಟ್ಟಿ ಜಗಳಕ್ಕೆ ಬಂದಿದ್ದ ಭೀಮಾನಾಯ್ಕ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು.
ಪಾದಯಾತ್ರೆಯ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಘಟನೆಗೆ ಕಾರಣರಾದ ಶಾಸಕ ಭೀಮಾನಾಯ್ಕ್ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ, ಭೀಮಾನಾಯ್ಕ್ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧದ ಪ್ರತಿಭಟನೆ ಕುರಿತು ಮಾತನಾಡಿದ ಶಾಸಕ ಭೀಮಾನಾಯ್ಕ್, ಮರಿಯಮ್ಮನಹಳ್ಳಿ ಪ.ಪಂ.ನಲ್ಲಿ 8 ಬಿಜೆಪಿ, 8 ಕಾಂಗ್ರೆಸ್ ಇದ್ದರೂ ಕ್ರಾಸ್ ವೋಟ್ ಮಾಡಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದರು. ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ನಾವು ಅದನ್ನೇ ಮಾಡಿದೆವು. ಇದಕ್ಕೆ ಇಲ್ಲಸಲ್ಲದ ಆರೋಪ ಹೊರಿಸಿದರೆ ಹೇಗೆ? ಬಿಜೆಪಿಯಿಂದಲೇ ಗೂಂಡಾ ಸಾಮ್ರಾಜ್ಯ ನಿರ್ಮಾಣವಾಗುತ್ತಿರುವುದು. ಒಬ್ಬ ಶಾಸಕನಿಗೆ ಹೊಡೆಯಲು ಬಂದರೆ ಹೊಡೆಸಿಕೊಳ್ಳಬೇಕಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಇಂಥ ಘಟನೆ ನಡೆದಿದೆಯಾ? ಬಿಜೆಪಿ ಸರ್ಕಾರದಲ್ಲಿ ಇಂಥ ಗಲಾಟೆ ನಡೆಯುತ್ತಿವೆ. ಹಗರಿಬೊಮ್ಮನಹಳ್ಳಿ ಸಿಪಿಐ ಮಲ್ಲಿಕಾರ್ಜುನ ಡೆಫಿನ್ ಬಿಜೆಪಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.



