ಬೆಂಗಳೂರು: ಕೈಗಾರಿಕೋದ್ಯಮಿಗಳ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗೊಂದು ಫುಡ್‍ಪಾರ್ಕ್ ಸ್ಥಾಪಸಲು ಸರ್ಕಾರ ಚಿಂತಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಎಫ್‍ಕೆಸಿಸಿಐನಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ರೈತೋದ್ಯಮ ಮತ್ತು ಕೃಷಿ ನವೋದ್ಯಮಗಳಿಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕೃಷಿಯತ್ತ ಗಮನಹರಿಸಿರುವುದು. ರೈತ ಬೆಳೆ ಬೆಳೆದು ಕಟಾವು ಮಾಡುವ ತನಕ ರೈತನ ಪಾತ್ರದ ಬಗ್ಗೆ ಗಮನಹರಿಸುತ್ತೇವೆ. ಆನಂತರವೂ ಸಹ ಕೃಷಿಕರ ಪಾತ್ರ ಗಮನಾರ್ಹವಾಗಬೇಕು. ಕೃಷಿ ಉತ್ಪನ್ನಗಳು ಕೈಗಾರಿಕಾ ಸ್ವರೂಪ ಪಡೆದುಕೊಳ್ಳಬೇಕು ಎಂದರು.
ಆಹಾರ ಸಂಸ್ಕರಣೆಗಾಗಿ ಪ್ರಧಾನಿಯವರು 10 ಸಾವಿರ ಕೋಟಿ ನೀಡಿದ್ದಾರೆ. ಅದನ್ನು ಬಳಕೆ ಮಾಡಿಕೊಂಡು ಕೃಷಿಯನ್ನು ಉತ್ತಮವಾಗಿ ಪರಿವರ್ತಿಸಬೇಕು. ಹಳ್ಳಿಗಳು ಇಂದು ವೃದ್ದಾಶ್ರಮಗಳಾಗುತ್ತಿವೆ. ರೈತರನ್ನು ಗೌರವಯುತವಾಗಿ ಕಾಣುತ್ತಿಲ್ಲ. ಕೃಷಿ ಆದಾಯ ದ್ವಿಗುಣಗೊಳ್ಳಬೇಕು. ರೈತರ ಬಗೆಗಿನ ಮನೋಭಾವನೆ ಬದಲಾಗಬೇಕು ಎಂದು ಹೇಳಿದರು.
ಬಿಜಾಪುರದ ಹಿಟ್ನಾಳ್ 50 ಎಕರೆ ಜಾಗವಿದ್ದು, ಅಲ್ಲಿ ಫುಡ್‍ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೊಂದರಂತೆ ಫುಡ್‍ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ವೇಳೆಯಲ್ಲಿ ಎಲ್ಲ ಕೈಗಾರಿಕೆಗಳು ಮುಚ್ಚಿಹೋಗಿದ್ದವು. ಆದರೆ ಕೃಷಿ ಚಾಲನೆಯಲ್ಲಿತ್ತು. ಕೃಷಿ ಕೂಡ ಮುಚ್ಚಿಹೋಗಿದ್ದರೆ ತಿನ್ನುವ ಅನ್ನಕ್ಕೆ ಬರ ಬರುತ್ತಿತ್ತು. ಈ ವರ್ಷ 136 ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ.ಈ ವರ್ಷ ಕೋವಿಡ್ ಕಾರಣದಿಂದ ಬೇರೆ ಬೇರೆ ಇಲಾಖೆಗಳ ಅನುದಾನವನ್ನು ಕಡಿತ ಮಾಡಲಾಗುತ್ತಿದೆ. ಆದರೆ ಕೃಷಿ ಅನುದಾನವನ್ನು ಕಡಿತ ಮಾಡಬಾರದು ಎಂದು ಸಿಎಂ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಎಫ್‍ಕೆಸಿಸಿಐನ ಅಧ್ಯಕ್ಷ ಪೆರಿಕಲ್.ಎಂ ಸುಂದರ್, ಉಪಾಧ್ಯಕ್ಷರಾದ ಐ.ಎಸ್. ಪ್ರಸಾದ್, ಬಿ.ವಿ.ಗೋಪಾಲರೆಡ್ಡಿ, ಕೆ.ಎಂ.ಶ್ರೀನಿವಾಸ್‍ಮೂರ್ತಿ, ಜೇವರ್ಗಿ ಆಗ್ರೋ ಫುಡ್‍ಪಾರ್ಕ್‍ನ ನಿರ್ದೇಶಕಿ ಎನ್.ಪೂಜಾ ಮುಂತಾದವರಿದ್ದರು.



