ಬೆಂಗಳೂರು: ಈ ಬಾರಿಯ 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವನ್ನು 2021ರ ಫೆಬ್ರವರಿ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಕಳೆದ 12 ವರ್ಷಗಳ ಕಾಲ ಯಶಸ್ಸನ್ನು ಕಂಡಿದೆ. ವಿಶ್ವದಲ್ಲಿ 5 ಸಾವಿರ ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆದರೆ, ಅವುಗಳಲ್ಲಿ ಕೇವಲ 45 ಚಲನಚಿತ್ರೋತ್ಸವಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದೀಗ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಅಂತರಾಷ್ಟ್ರೀಯ ಮಾನ್ಯತೆ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಒಂದು ವೇಳೆ ಮಾನ್ಯತೆ ದೊರೆತರೆ ಇದು ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಆದ್ದರಿಂದ 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಆಯೋಜಿಸಲು ಸಮ್ಮತಿ ನೀಡುವಂತೆ ಹಾಗೂ ಅದಕ್ಕೆ ಅಗತ್ಯ ಅನುದಾನವನ್ನು ದೊರಕಿಸಿಕೊಡುವಂತೆ ನಿಯೋಗವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ದೇಶದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸುತ್ತದೆ. ಉಳಿದಂತೆ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳು ಚಲನನಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ಅಂಶವನ್ನು ನಿಯೋಗ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.



