ದಾವಣಗೆರೆ: ನಾವು ಎಸ್ಟಿ ಸಮಾಜಕ್ಕೆ ಇದ್ದ ಮೀಸಲಾತಿಯನ್ನು ಶೇಕಡಾ 3 ರಿಂದ 7ಕ್ಕೆ ಹೆಚ್ಚಿಸಿದ್ದೇವೆ. ಈ ಹಿಂದೆಯೇ ಮಾಡಿದ್ದರೆ ಇಷ್ಟೊತ್ತಿಗೆ ಮೀಸಲಾತಿ ಸಿಗುತಿತ್ತು. ಆದರೆ ಈ ಹಿಂದೆ ಅಧಿಕಾರ ನಡೆಸಿದವರು ಮೊದಲನೇ ಹೆಜ್ಜೆ ಇಡಲಿಲ್ಲ. ನಾವು ಮಾಡಿದ್ದೇವೆ. ಇಂಥ ಕೆಲಸ ಮಾಡಲು ಹೃದಯವಂತಿಕೆ ಬೇಕು ಎಂದು ಸಿಎಂ ಬಸವರಾಜ ಮೊಮ್ಮಾಯಿ ಹೆಳಿದರು.
ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡಿರುವುದು ಈ ಸಮಾಜಕ್ಕೆ ಸಿಗುವ ಕುರಿತಂತೆ ಪ್ರಕ್ರಿಯೆ ಪ್ರಾರಂಭವಾಗಿದೆ. ಖಂಡಿತವಾಗಿಯೂ ಆಗುತ್ತದೆ. ವಾಲ್ಮೀಕಿ ಸಮುದಾಯದ ಕಾರ್ಯಕ್ರಮಗಳು ಎಸ್ಟಿ ಇಲಾಖೆ ಮೂಲಕ ಜಾರಿಯಾಗುತ್ತಿದೆ. ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದೇವೆ. ನನ್ನದು ಏಕಲವ್ಯನ ರೀತಿ ಒಂದೇ ಗುರಿ. ಎಸ್ಸಿ, ಎಸ್ಟಿ ಸಮಾಜದ ಅಭಿವೃದ್ಧಿಯೇ ನಮ್ಮ ಗುರಿ ಎಂದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಕುರಿತ ಪ್ರತಿಯನ್ನು ಪ್ರಸನ್ನಾನಂದಪುರಿ ಶ್ರೀಗಳಿಗೆ ತೋರಿಸಿದ್ದೇನೆ. ಈ ಸಮಾಜಕ್ಕಾಗಿ ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ. ಎಸ್‌ಟಿ ಇಲಾಖೆ ನಾನು ಸಿಎಂ ಆದ ಬಳಿಕ ಮಾಡಿದ ಮೊದಲ ಕೆಲಸ. ನಾಗಮೋಹನ್ ದಾಸ್ ಅವರ ವರದಿ ಒಂದು ವರ್ಷವಾದರೂ ಆಗಿರಲಿಲ್ಲ. ತುಳಿತಕ್ಕೊಳಗಾದವರಿಗೆ ನೀಡಿದ ವರದಿಯನ್ನು ಅವರ ಜೊತೆ ಕುಳಿತು ನಾವು ಸಿದ್ಧಪಡಿಸಿದ್ದೇವೆ ಎಂದರು.
ನಾನು ಬಯಸಿ ಸಿಎಂ ಆದವನಲ್ಲ. ಈ ಸಮುದಾಯ, ದೇವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆ. ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ನಿಮ್ಮ ಸಮಾಜವು ನಮಗೆ ಬೆಂಬಲ ನೀಡಬೇಕು. ಜೀವನದ ಕೊನೆ ಉಸಿರು ಇರುವವರೆಗೂ ವಾಲ್ಮೀಕಿ ಸಮುದಾಯದ ಪರವಾಗಿ ನಿಲ್ಲುತ್ತೇನೆ. ಪ್ರೀತಿ, ವಾತ್ಸಲ್ಯ, ಭಕ್ತಿ ಭಾವದ ಸಂಬಂಧ ಈ ಸಮಾಜದ ಜೊತೆ ಇದೆ. ಸ್ಥಾನಮಾನಕ್ಕೆ ಸಂಬಂಧ ಇಲ್ಲ. ಸ್ಥಾನ ಇರಬಹುದು, ಇಲ್ಲದಿರಬಹುದು. ಆದರೆ, ವಾಲ್ಮೀಕಿ ಶ್ರೀಗಳ ಪ್ರೀತಿ, ವಿಶ್ವಾಸ ಸದಾ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಾಲ್ಮೀಕಿ ಸಮುದಾಯವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ ವರ್ಷ ವಾಲ್ಮೀಕಿ ಸಮುದಾಯದಲ್ಲಿ ದುಃಖದ ಮೋಡ ಕವಿದಿತ್ತು. ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ಮೇಲೆ ಈಗ ಬೆಳಕು ಬಿದ್ದಿದೆ. ಇನ್ನು ಮುಂದೆ ಈ ಸಮಾಜಕ್ಕೆ ಒಳ್ಳೆಯ ಭವಿಷ್ಯ ಇದೆ. ಈ ಸಮಾಜ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಾಲ್ಮೀಕಿ ಅಂದರೆ ಪರಿವರ್ತನೆ . ವಾಲ್ಮೀಕಿ ರಚನೆ ಮಾಡಿರುವ ರಾಮಾಯಣ ಗ್ರಂಥ ಜಗತ್ತಿನ ಶ್ರೇಷ್ಠ ಹತ್ತು ಗ್ರಂಥಗಳಲ್ಲಿ ಮೇಲ್ಪಂಕ್ತಿಯಲ್ಲಿದೆ. ವಾಲ್ಮೀಕಿ ಅಂದರೆ ಪರಿವರ್ತನೆ. ತಂದೆ – ಮಗ, ಗಂಡ – ಹೆಂಡತಿ, ಸಹೋದರರ ಪ್ರೀತಿ ಸೇರಿದಂತೆ ಎಲ್ಲಾ ರೀತಿಯ ಸಂಬಂಧಗಳನ್ನು ತೋರಿಸಿರುವುದು ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿದೆ. ದುಷ್ಟ ಶಕ್ತಿಯನ್ನು ಧೈರ್ಯದಿಂದ ಹಿಮ್ಮೆಟ್ಟಿಸುವ, ಸಂಹರಿಸುವ ರಾಮನ ಕುರಿತಾಗಿ ರಾಮಾಯಣದಲ್ಲಿ ತೋರಿಸಿದ್ದಾರೆ. ನೀವೆಲ್ಲರೂ ಹೆಮ್ಮೆ ಪಡಬೇಕು. ವೀರಸಿಂಧೂರ ಲಕ್ಷ್ಮಣ ಹೋರಾಟದ ತ್ಯಾಗ, ಬೇಡರ ಕಣ್ಣಪ್ಪರ ಭಕ್ತಿ ಎಂದಿಗೂ ಅಜರಾಮರ ಎಂದು ಹೇಳಿದರು.
ಮಠದಲ್ಲಿ ರೂಪಿಸಿರುವ ತೇರು ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದೆ. ಒಂದೂವರೆ ಕೋಟಿ ರೂಪಾಯಿ ಖರ್ಚಾಗಿದೆ. ಈ ಕಾರ್ಯ ಒಬ್ಬರೇ ಮಾಡಿದ್ದಾರೆ. ಏಳೆಂಟು ಜನರು ಸೇರಿ ತೇರು ಮಾಡುತ್ತಾರೆ. ತೇರು ಒಬ್ಬರೇ ಮಾಡಿರುವುದು ಹೆಮ್ಮ ವಿಚಾರ. ಅವರು ಭಾಗ್ಯವಂತ. ತೇರು ಮಾಡುವಂಥ ಭಾಗ್ಯ ಯಾರಿಗೂ ಸಿಗಲ್ಲ, ಆನಂದ್ ಸಿಂಗ್‌ಗೆ ಸಿಕ್ಕಿದೆ ಎಂದು ಪ್ರಶಂಸಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಶ್ರೀರಾಮನ ಪ್ರತಿಮೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ವಾಲ್ಮೀಕಿ ಪೀಠಾಧಿಪತಿ ಪ್ರಸನ್ನನಾಂದಪುರಿ ಶ್ರೀ, ಸಚಿವರಾದ ಆನಂದ್ ಸಿಂಗ್, ಮುರುಗೇಶ್ ನಿರಾಣಿ, ಶಾಸಕ ಎಸ್.ವಿ. ರಾಮಚಂದ್ರ, ರಾಜೂಗೌಡ ಹಾಗೂ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಹಾಜರಿದ್ದರು.



