Connect with us

Dvgsuddi Kannada | online news portal | Kannada news online

ದಾವಣಗೆರೆ: ಮಳೆಗಾಲ ಆರಂಭಕ್ಕೂ ಮುನ್ನ ಜಲಶಕ್ತಿ ಅಭಿಯಾನ ಕಾಮಗಾರಿ ಪೂರ್ಣಗೊಳಿಸಿ

ಪ್ರಮುಖ ಸುದ್ದಿ

ದಾವಣಗೆರೆ: ಮಳೆಗಾಲ ಆರಂಭಕ್ಕೂ ಮುನ್ನ ಜಲಶಕ್ತಿ ಅಭಿಯಾನ ಕಾಮಗಾರಿ ಪೂರ್ಣಗೊಳಿಸಿ

ದಾವಣಗೆರೆ: ನೀರಿನ ಸದ್ಬಳಕೆ ಹಾಗೂ ಸಮಗ್ರ ನಿರ್ವಹಣೆ ನಿಟ್ಟಿನಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಂಡು, ಅಂತರ್ಜಲ ವೃದ್ಧಿಸಲು ಸರ್ಕಾರ ರೂಪಿಸಿರುವ ಜಲಶಕ್ತಿ ಅಭಿಯಾನದಡಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವುದರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ಡಿಸ್ಟ್ರಿಕ್ಟ್ ಡೆವೆಲಪ್‍ಮೆಂಟ್ ಕೋ-ಆರ್ಡಿನೇಷನ್ & ಮಾನಿಟರಿಂಗ್ ಕಮಿಟಿ-ಡಿಡಿಸಿಎಂಸಿ) ‘ದಿಶಾ’ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಶಕ್ತಿ ಅಭಿಯಾನದಡಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಸಮಗ್ರ ನೀರು ಸಂರಕ್ಷಣೆ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದಾದ ಕೆರೆಗಳ ಅಭಿವೃದ್ಧಿ, ಕೆರೆ ಹೂಳೆತ್ತುವುದು, ಬೋರ್‍ವೆಲ್ ರೀಚಾರ್ಜ್, ಗೋಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿ, ಚೆಕ್‍ಡ್ಯಾಂಗಳ ಹೂಳೆತ್ತುವುದು ಸೇರಿದಂತೆ ವಿವಿಧ ಜಲಸಂರಕ್ಷಣೆಯ ಕಾಮಗಾರಿಗಳನ್ನು ಈಗಾಗಲೆ ಗುರುತಿಸಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ 100 ದಿನಗಳ ಒಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಕೈಗೊಂಡರೆ, ಮಳೆ ನೀರು ಸಂಗ್ರಹಣೆಗೊಂಡು ಅಂತರ್ಜಲ ಅಭಿವೃದ್ಧಿಯಾಗುವುದರ ಜೊತೆಗೆ ಜಿಲ್ಲೆಯ ಹಸಿರೀಕರಣಕ್ಕೂ ನೆರವಾಗಲಿದೆ,

ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಸೃಷ್ಟಿಯಾಗಿ ಕೂಲಿಕಾರರಿಗೆ ನೆರವಾಗಲಿದೆ. ಇದೇ ಯೋಜನೆಗಳಡಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಆವರಣದಲ್ಲಿರುವ ಬೋರ್‍ವೆಲ್‍ಗಳಿಗೆ ಇಂಗುಗುಂಡಿ ನಿರ್ಮಿಸುವಂತೆ ಸೂಚನೆ ನೀಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಭಾರವನ್ನೂ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಡಿ ಒಂದು ಸಾವಿರಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ 547 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿದ್ದು, 135 ಕಾಮಗಾರಿಗಳನ್ನು ಈಗಾಗಲೆ ಪ್ರಾರಂಭಿಸಲಾಗಿದೆ. ಬಾಕಿ ಕಾಮಗಾರಿಗಳಿಗೆ ಏಪ್ರಿಲ್ 22 ರ ಒಳಗಾಗಿ ಕ್ರಿಯಾಯೋಜನೆ ರೂಪಿಸಿ, ಅನುಮೋದನೆ ನೀಡಲಾಗುವುದು ಎಂದರು.

ಮನೆ ಮಂಜೂರಾತಿಗೆ ಹಣಕ್ಕೆ ಬೇಡಿಕೆ ಆರೋಪ : ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ಮಂಜೂರು ಮಾಡಲು ಕೆಲವು ಮಧ್ಯವರ್ತಿಗಲು ಫಲಾನುಭವಿಗಳಿಂದ ಕನಿಷ್ಟ 25 ಸಾವಿರ ರೂ. ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಕುರಿತು ದೂರುಗಳು ಬಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಪಂ. ಯೋಜನಾ ನಿರ್ದೇಶಕರು, ಉಪಕಾರ್ಯದರ್ಶಿಗಳು ಸೇರಿದಂತೆ ಎಲ್ಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ವಸತಿ ಯೋಜನೆ ಫಲಾನುಭವಿಗಳ ಪಟ್ಟಿ ಪಡೆದುಕೊಂಡು, ಗ್ರಾಮಗಳಿಗೆ ಭೇಟಿ ನೀಡಿ, ಫಲಾನುಭವಿಗಳ ಅಭಿಪ್ರಾಯ ಪಡೆಯಬೇಕು. ಏಪ್ರಿಲ್ 30 ರೊಳಗಾಗಿ ಎಲ್ಲ ತಾ.ಪಂ. ಅಧಿಕಾರಿಗಳು ಫೋಟೋ ಹಾಗೂ ವಿಡಿಯೋ ಸಹಿತದ ವರದಿಯನ್ನು ಸಿದ್ಧಪಡಿಸಿ ಸಂಸದರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಾಕೀತು ಮಾಡಿದರು.

1346 ಮನೆಗಳು ರದ್ದು : ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯಡಿ ಇದುವರೆಗೂ ಮನೆಗಳ ನಿರ್ಮಾಣ ಪ್ರಾರಂಭಿಸದ 1346 ಫಲಾನುಭವಿಗಳ ಮನೆ ಮಂಜೂರಾತಿಯನ್ನು ರದ್ದುಪಡಿಸಿ ರಾಜೀವ್‍ಗಾಂಧಿ ವಸತಿ ನಿಗಮ ಆದೇಶ ಹೊರಡಿಸಿದೆ. ಈ ಆದೇಶವನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಿದ ಪ್ರಸ್ತಾವನೆ ಈಗಾಗಲೆ ತಿರಸ್ಕøತಗೊಂಡಿದೆ. ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 628 ಮನೆಗಳ ಅನುಮೋದನೆ ಬಾಕಿ ಉಳಿದಿದ್ದು, ರಾಜ್ಯ ಸರ್ಕಾರದಿಂದ ಗುರಿ ನಿಗದಿಪಡಿಸಿಲ್ಲ, ಅಲ್ಲದೆ ಅನುದಾನ ಬಿಡುಗಡೆಗೊಂಡಿಲ್ಲ. ಕೇಂದ್ರ ಸರ್ಕಾರದಿಂದ ಮಾತ್ರ 1.50 ಲಕ್ಷ ರೂ. ಪ್ರತಿ ಮನೆಗೆ ಅನುದಾನ ಬಿಡುಗಡೆಯಾಗುತ್ತಿದೆ. ಸ್ವಂತ ನಿವೇಶನ ಹೊಂದಿದವರು ಮಾತ್ರ ಈ ಯೋಜನೆ ಪ್ರಯೋಜನ ಪಡೆಯಬಹುದು. ಈಗಾಗಲೆ ಇಂತಹ 215 ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಮುಂದೆಬಂದಿದ್ದಾರೆ ಎಂದು ಹೇಳಿದರು.

ಸಂಸದರು ಪ್ರತಿಕ್ರಿಯಿಸಿ, ಅರ್ಹರಿರದ ಹಾಗೂ ಆಸಕ್ತಿ ಇರದ ಫಲಾನುಭವಿಗಳನ್ನು ವಸತಿ ಯೋಜನೆಗೆ ಆಯ್ಕೆ ಮಾಡಿದರೆ ಈ ರೀತಿ ಆಗುತ್ತದೆ. ಆಯ್ಕೆ ಸಂದರ್ಭದಲ್ಲಿಯೇ ಇವೆಲ್ಲವನ್ನೂ ಪರಿಶೀಲಿಸಿ ಅರ್ಹ ಹಾಗೂ ಆಸಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ ವರದಿ ಸಲ್ಲಿಸಿದಲ್ಲಿ, ರದ್ದಾಗಿರುವ ಆದೇಶವನ್ನು ಹಿಂಪಡೆಯಲು ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದರು.

ಸಭೆಯಲ್ಲಿ ಮಾಯಕೊಂಡ ಕ್ಷೇತ್ರ ಶಾಸಕ ಪ್ರೊ. ಲಿಂಗಣ್ಣ, ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ದಿಶಾ ಸಮಿತಿ ಸದಸ್ಯರುಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top