ದಾವಣಗೆರೆ: ಹಂದಿಗಳ ಸ್ಥಳಾಂತರಕ್ಕಾಗಿ ಹೆಬ್ಬಾಳು ಬಳಿ 7 ಎಕರೆ ಜಾಗ ಗುರುತಿಸಿದ್ದು, ಜಾಗದ ಹಸ್ತಾಂತರ ಪ್ರಕ್ರಿಯೆ ಜಾರಿಯಲ್ಲಿದೆ. ಅಲ್ಲದೆ ಹಂದಿಗಳನ್ನು ಸ್ಥಳಾಂತರಿಸುವ ಜಾಗಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ಡಿಸ್ಟ್ರಿಕ್ಟ್ ಡೆವೆಲಪ್‍ಮೆಂಟ್ ಕೋ-ಆರ್ಡಿನೇಷನ್ & ಮಾನಿಟರಿಂಗ್ ಕಮಿಟಿ-ಡಿಡಿಸಿಎಂಸಿ) ‘ದಿಶಾ’ ಪ್ರಗತಿ ಪರಿಶೀಲನಾ ಸಭೆಯ ಮಾತನಾಡಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಸಿಕಸ, ಒಣಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಕಾರ್ಯ ಜಾರಿಗೆ ತರಲಾಗಿದ್ದು, ಹಂದಿಗಳನ್ನು ಸ್ಥಳಾಂತರಿಸುವ ಪ್ರದೇಶಕ್ಕೆ ಹಸಿಕಸವನ್ನು ಪಾಲಿಕೆಯಿಂದಲೇ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಹೊಸದಾಗಿ 2.80 ಕೋಟಿ ರೂ. ಗಳ ವೆಚ್ಚದಲ್ಲಿ 13 ಆಟೋಟಿಪ್ಪರ್, ಬ್ಯಾಟರಿ ಚಾಲಿತ 13 ಆಟೋಟಿಪ್ಪರ್, 2 ಟ್ಯಾಕ್ಟರ್, 2 ಟಿಪ್ಪರ್‍ಟ್ರಕ್, 2 ಸ್ಕಿಡ್ ಸ್ಟೀರ್ ಲೋಡರ್‍ಗಳನ್ನು ಖರೀದಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲ ವಾಹನಗಳು ಸರಬರಾಜಾದಲ್ಲಿ, ನಗರ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ನಿತ್ಯವೂ ಹಸಿಕಸ ಹಾಗೂ ವಾರಕ್ಕೆ 3 ದಿನ ಒಣಕಸ ಸಂಗ್ರಹಿಸುವ ಕಾರ್ಯ ಜಾರಿಗೆ ತರಲಾಗುವುದು ಎಂದರು.
ಸಂಸದರ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಸದ್ಯ ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಅಲ್ಲ, ಹಂದಿಗಳ ನಗರವಾಗಿದೆ. ನಗರದಲ್ಲಿ ಹಂದಿಗಳ ಬೇಕಾಬಿಟ್ಟಿ ಸಂಚಾರಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ನಗರದಲ್ಲಿ ಏನೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ಹಂದಿಗಳ ಹಾವಳಿಯಿಂದಾಗಿ ಸಾರ್ವಜನಿಕರು ಜನಪ್ರತಿನಿಧಿಗಳನ್ನು ದೂಷಿಸುವಂತಾಗಿದೆ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.



