Connect with us

Dvgsuddi Kannada | online news portal | Kannada news online

ದಾವಣಗೆರೆ: ಯಾವ ಧರ್ಮಕ್ಕೂ ವಿಶೇಷ ಸ್ಥಾನಮಾನ ಇಲ್ಲ, ಎಲ್ಲರಿಗೂ ಸಂವಿಧಾನ ಒಂದೇ; ಸಿಎಂ ಸಿದ್ದರಾಮಯ್ಯ

cm siddaramaih 1

ದಾವಣಗೆರೆ

ದಾವಣಗೆರೆ: ಯಾವ ಧರ್ಮಕ್ಕೂ ವಿಶೇಷ ಸ್ಥಾನಮಾನ ಇಲ್ಲ, ಎಲ್ಲರಿಗೂ ಸಂವಿಧಾನ ಒಂದೇ; ಸಿಎಂ ಸಿದ್ದರಾಮಯ್ಯ

ದಾವಣಗೆರೆ: ದೇಶ ನನಗೇನು ಕೊಡ್ತು ಅಲ್ಲ, ನಾನು ದೇಶಕ್ಕಾಗಿ ನನ್ನ ಕರ್ತವ್ಯವೇನು ಎಂದು ಯುವಕರು ಅರಿತುಕೊಳ್ಳಬೇಕು. ಅನೇಕ ಶಕ್ತಿಗಳು ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿವೆ. ಯಾವ ಧರ್ಮಕ್ಕೂ ವಿಶೇಷ ಸ್ಥಾನಮಾನ ಇಲ್ಲ, ಎಲ್ಲರಿಗೂ ಸಂವಿಧಾನ ಒಂದೇ. ಆದ್ದರಿಂದ ಸಂವಿಧಾನ ರಕ್ಷಿಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಯುವಜನತೆಗೆ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬಾಪೂಜಿ ಎಂಬಿಎ ಮೈದಾನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ನಗಾರಿ ಬಾರಿಸಿ ಹಾಗೂ ಹೊಂಬಾಳೆ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಇಂದು ಎಲ್ಲರೂ ಶಿಕ್ಷಣ ಪಡೆದು ಉದ್ಯೋಗ ಗಳಿಸಿ, ಗೌರವ ಮತ್ತು ಸಮಾನತೆಯಿಂದ ಬಾಳಲು ಸಾಧ್ಯವಾಗಿದೆ. ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಸಂವಿಧಾನ ರಕ್ಷಿಸಿ, ಉಳಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ಒಪ್ಪಿ ದೇಶದಲ್ಲಿ ಆಡಳಿತ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಎಲ್ಲಾ ವ್ಯಕ್ತಿಗಳಿಗೆ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸಮಾನತೆ ದೊರಕಬೇಕು ಎಂಬುವುದು ಡಾ.ಅಂಬೇಡ್ಕರ್ ಆಶಯವಾಗಿತ್ತು.

ಸಂವಿಧಾನ ಈ ಸಾರ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಇದರ ಹಿನ್ನಲೆಯಲ್ಲಿ ಸರ್ಕಾರ ಪ್ರತಿ ಶಾಲೆಯಲ್ಲಿ ಸಂವಿಧಾನ ಓದು ಕಾರ್ಯಕ್ರಮ ಜಾರಿ ಮಾಡಿದೆ. ಮಕ್ಕಳಿಗೆ ಸಂವಿಧಾನದ ಪೀಠಿಕೆ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತಿದೆ. ಅಂಬೇಡ್ಕರ್ ಅವರ ಆರ್ಥಿಕ ಸಮಾನತೆಯ ಆಶಯವನ್ನು ಈಡೇರಿಸುವ ದೃಷ್ಟಿಯಿಂದ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದರು.

ದೇಶದಲ್ಲಿ ಶೇ.35 ರಷ್ಟು ಯುವ ಜನರಿದ್ದಾರೆ, ಯುವಜನರೇ ನಮ್ಮ ದೇಶದ ಆಸ್ತಿ. ಪ್ರತಿಯೊಬ್ಬ ಯುವಕ, ಯವತಿ ಸಮಾಜಮುಖಿ ಮನೋಭಾವ ಬೆಳಸಿಕೊಳ್ಳಬೇಕು. ವಿವಿಧ ಭಾಷೆ,‌ಧರ್ಮ, ಸಂಸ್ಕೃತಿ ಇವರುವುದರಿಂದ ವೀದ್ಯಾರ್ಥಿಗಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಅತ್ಯಗತ್ಯವಾಗಿದೆ. ಯುವಜನರು ದೇಶವನ್ನು ಮುಂದೆ ಕೊಂಡೊಯ್ಯಲು ಹಾಗೂ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಭವಿಷ್ಯ ನಿರ್ಮಾಣ ಮಾಡುವವರು ಯುವಜನರು, ಇದನ್ನು ಮನಗಂಡಿದ್ದ ಸ್ವಾಮಿ ವಿವೇಕಾನಂದರು ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಯುವ ಜನರಿಗೆ ಕರೆ ನೀಡಿದರು.

ಯುವಕರಿಗೆ ಜೀವನದಲ್ಲಿ ಗುರಿ ಇರಬೇಕು. ಇದನ್ನು ಸಾಧಿಸಲು ಪರಿಶ್ರಮ ಪಡಬೇಕು. ಆಗ ಮಾತ್ರ ಗುರಿ ಸಾಧನೆ ಮಾಡಬಹುದು. ಯುವ ಜನತೆ ದೇಶಕ್ಕೆ ಸಂಪತ್ತಾಗಬೇಕು, ಹೊರೆಯಾಗಬಾರದು. ರಾಜ್ಯದಲ್ಲಿ 1.62 ಲಕ್ಷ ಯವಕ ಯುವತಿಯರಿಗೆ ಯುವನಿಧಿ ಯೋಜನೆಯಡಿ ರೂ.216 ಕೋಟಿ ನಿರುದ್ಯೋಗ ಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇದರೊಂದಿಗೆ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ಸುಳ್ಳು ಸುದ್ದಿ ಹಾಗೂ ಸಮೂಹ ಸನ್ನಿಯಿಂದ ದೂರವಿರಿ; ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.35 ರಷ್ಟು ಯುವಜನರಿದ್ದಾರೆ. ಕೆಲ ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣ ಮೂಲಕ ದೇಶದ ಯುವ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ಒರೆಗೆ ಹಚ್ಚಿ, ಸತ್ಯಾಸತ್ಯೆಯನ್ನು ತಿಳಿದುಕೊಳ್ಳಬೇಕು. ದ್ವೇಷವನ್ನು ಬಿತ್ತುವ ವಿಚಾರ ಹಾಗೂ ಸಮೂಹ ಸನ್ನಿಯಿಂದ ದೂರವಿರಬೇಕು. ದೇಶದ ಬಹುತ್ವ ಅರ್ಥೈಸಿಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವನಾಗಿದ್ದಾಗ ದಾವಣಗೆರೆಯಲ್ಲಿ ಪ್ರಥಮವಾಗಿ ಯುವಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. 2 ದಶಕಗಳ ತರುವಾಯ ಮತ್ತೊಮ್ಮೆ ರಾಜ್ಯಮಟ್ಟದ ಯುವಜನೋತ್ಸವ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾ ಸಚಿವನಾಗಿದ್ದಾಗ ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಕೋಳ, ಟೆನ್ನಿಸ್, ಬಾಸ್ಕೆಟ್‍ಬಾಲ್ ಕ್ರೀಡಾಂಗಣಗಳನ್ನು ನಿರ್ಮಿಸಿದ್ದೆ. ಸದ್ಯ ರಾಜ್ಯ ಸರ್ಕಾರದಿಂದ ಸಂಸದ ನೆರವಿನಿಂದ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಜೆ.ಹೆಚ್.ಪಾಟೀಲ್ ನಗರದಲ್ಲಿ ಕ್ರಿಕೇಟ್ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿವೆ. ದಾವಣಗೆರೆ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 5802 ಯುವಜನರಿಗೆ ರೂ.8.5 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ದಾವಣಗೆರೆ ನಗರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಕಸಾಪ ಸದಸ್ಯರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಯೋಜನೆಗಳು ಜನತೆಯ ಮನಮುಟ್ಟಿವೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯನ್ನು ಯುವ ಜನತೆಗೆ ನೀಡಿ, ಯುವ ಜನಾಂಗಕ್ಕೆ ಸರ್ಕಾರ ಪ್ರಾಮುಖ್ಯತೆ ನೀಡಿದೆ.ಯುವಕರ ದೇಶದ ಆಸ್ತಿ. ಅವರ ಪ್ರತಿಭೆ ಗುರುತಿಸಿ ಅದಕ್ಕೆ ಪೂರಕವಾದ ವಾತಾವರಣ ಸೃಷ್ಠಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಮ್ಮ ಸಂವಿಧಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಿಯಾಯೋಜನೆ ರೂಪಿಸಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಇದಕ್ಕೂ ಮೊದಲು ನಗರದ ಕರ್ನಲ್‌ ಎಂ.ಬಿ. ರವೀಂದ್ರನಾಥ್‌ ವೃತ್ತದಿಂದ ಆರಂಭವಾದ ಮೆರವಣಿಗೆ ರಿಂಗ್ ರಸ್ತೆಯ ಮೂಲಕ ಸಾಗಿ ಎಂಬಿಎ ಕಾಲೇಜು ಮೈದಾನ ಸೇರಿತು. ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕೇರಳದ ತೆಯ್ಯಂ, ಕಥಕ್ಕಳಿ, ಪಂಜಾಬಿನ ಭಾಂಗ್ರಾ, ಮಹಾರಾಷ್ಟ್ರದ ಲಾವಣಿ, ಒಡಿಶಾದ ಸಂಬಲ್‌ಪುರಿ, ಮಧ್ಯಪ್ರದೇಶದ ಬರೇಡಿ ನೃತ್ಯ ಕಲಾತಂಡಗಳು ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಿದ್ದವು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಸವರಾಜು ವಿ ಶಿವಗಂಗಾ, ಬಿ.ದೇವೇಂದ್ರಪ್ಪ, ಬಿ.ಪಿ.ಹರೀಶ್, ಶಾಂತನಗೌಡ.ಡಿ.ಜಿ. ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್.ಕೆ, ರಾಜ್ಯ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯ್ಕ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್.ಡಿ, ಪೊಲೀಸ್ ಉಪ ಮಹಾನಿರೀಕ್ಷಕ ರಮೇಶ್.ಬಿ, ಜಿಲ್ಲಾ ಪಂಚಾಯಿತಿ ಸಿಇಓ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಮಾಜಿ ಸಚಿವ ಹೆಚ್.ಆಂಜನೇಯ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಸ್ವಾಗತಿಸಿದರು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ವಂದಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

davangere lokayukta visit 2
davangere mahanagara palike dvgsuddi
davangere lokayukta 2
Morarji Desai school 1
davangere lokayukta visit 1
Advertisement
Advertisement Enter ad code here

Title

To Top