Connect with us

Dvgsuddi Kannada | online news portal | Kannada news online

ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿ ಜೂ. 21 ರಂದು ಅಂತರಾಷ್ಟೀಯ ಯೋಗ ದಿನಾಚರಣೆ; 3 ಸಾವಿರ ಜನರಿಂದ ಯೋಗ ಪ್ರದರ್ಶನ

dvg dc

ದಾವಣಗೆರೆ

ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿ ಜೂ. 21 ರಂದು ಅಂತರಾಷ್ಟೀಯ ಯೋಗ ದಿನಾಚರಣೆ; 3 ಸಾವಿರ ಜನರಿಂದ ಯೋಗ ಪ್ರದರ್ಶನ

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ಜೂನ್ 21ರ ಬೆಳಿಗ್ಗೆ 5.30 ರಿಂದ 7.45 ರವರೆಗೆ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೃಹತ್ ಯೋಗ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಜೂ.21 ರಂದು ಬೆಳಗ್ಗೆ 5.30 ರಿಂದ 6ರವರೆಗೆ ಬ್ರಹ್ಮಕುಮಾರಿ ಸಂಸ್ಥೆ ವತಿಯಿಂದ ಧ್ಯಾನ, ಬೆಳಗ್ಗೆ 6 ರಿಂದ 6.20 ರವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಷ್ಟ ನಮಸ್ಕಾರ ಹಾಗೂ 7 ಗಂಟೆಯವರೆಗೆ ಉದ್ಘಾಟನಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತದನಂತರ ಸಾಮಾನ್ಯ ಯೋಗ ಶಿಷ್ಟಾಚಾರ ಮಾಡಲಾಗುವುದು. ಯೋಗ ದಿನಾಚರಣೆ ನಗರದ ಎಲ್ಲಾ ಯೋಗ ಸಂಸ್ಥೆಗಳು, ಯೋಗಾಸ್ತಕರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ಜನತೆ ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯಾದ್ಯಂತ 36 ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಯೋಗಾಭ್ಯಾಸ ನಡೆಸಲಾಗುತ್ತಿದೆ. ಯೋಗದಲ್ಲಿ ಯೋಗಾ ಪಾಥ್, ಯೋಗ ಸಂಗಮದಿಂದ ಯೋಗ ತರಬೇತಿ ನೀಡಲಾಗುವುದು. ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ಆರೋಗ್ಯ ವೃದ್ಧಿಸುತ್ತದೆ ಎಂದರು.

ಹಿಟ್ ಅಂಡ್ ರನ್ ಪ್ರಕರಣ ತ್ವರಿತ ಪರಿಹಾರ

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, 2023 ರಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ 324 ಜನರು ಪ್ರಾಣ ಕಳೆದುಕೊಮಡಿದ್ದಾರೆ. 2024 ರಲ್ಲಿ ಶೇ 30 ರಷ್ಟು ತಗ್ಗಿದ್ದು ಅಪಘಾತದಲ್ಲಿ 260 ಜನರು ಸಾವನಪ್ಪಿದ್ದಾರೆ. ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಚಾರಿ ನಿಯಮಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಏಕಮುಖ ರಸ್ತೆಯನ್ನು ಸಂಚರಿಸುವುದು ಸಾಮಾನ್ಯವಾಗಿದೆ. ದ್ವಿ ಚಕ್ರ ವಾಹನ ಚಾಲಕರು ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಮತ್ತು ಪ್ರಶ್ನಿಸಿದಲ್ಲಿ ನೀನು ಯಾರು ಎಂದು ಪ್ರಶ್ನಿಸುವ ಮನೋಭಾವ ಜನರಲ್ಲಿದ್ದು ಇದು ಸ್ವತಃ ನನಗೆ ಅನುಭವವಾಗಿದೆ. ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಹಿಟ್ ಅಂಡ್ ರನ್ ಪ್ರಕರಣ ಘಟಿಸಿದಾಗ ಪರಿಹಾರ ಪಡೆಯಲು ಅವಕಾಶ ಇದೆ. ಮರಣ ಹೊಂದಿದಲ್ಲಿ ಎರಡು ಲಕ್ಷ, ಗಾಯಾಳು ಆದಲ್ಲಿ ರೂ.50 ಸಾವಿರ ಪಡೆಯಬಹುದು. ಪರಿಹಾರ ಪಡೆಯಲು ಸಂಬಂಧಪಟ್ಟ ಠಾಣೆಯಲ್ಲಿ ದಾಖಲಿಸಿದ ಎಫ್‍ಐಆರ್ ನೊಂದಿಗೆ 30 ದಿನಗಳ ಒಳಗಾಗಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಜಿಲ್ಲಾಡಳಿತ ವತಿಯಿಂದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ 2 ಲಕ್ಷ, ಗಾಯಾಳುಗೆ 50 ಸಾವಿರ ಕೇವಲ ಒಂದು ತಿಂಗಳಲ್ಲಿ ಪರಿಹಾರ ಒದಗಿಸಲಾಗುವುದು ಎಂದರು.

ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ್ರೆ ದಂಡ ವಿಧಿಸಿ ಪರವಾಗಿ ರದ್ದುಗೊಳಿಸಿ

ನಗರದ ನಾನಾ ಕಡೆ ರಸ್ತೆಗಳು ಹದಗೆಟ್ಟಿರುವುದು ಕಂಡು ಬಂದಿದೆ. ಪಾಲಿಕೆಯಿಂದ ಅಂತಹ ಬ್ಲಾಕ್‍ಸ್ಪಾಟ್‍ಗಳನ್ನು ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಅಲ್ಲದೇ ನಗರದಲ್ಲಿ ಒನ್ ವೇ ರಸ್ತೆಗಳಲ್ಲಿ ತೆರಳುವುದರಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ ಆದ್ದರಿಂದ ಏಕಮುಖ ಸಂಚಾರ ನಿರ್ಬಂಧಿಸುವಂತೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೇ ಸೂಚನೆ, ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಅಧಿಕ ಮೊತ್ತದ ದಂಡ ವಿಧಿಸುವುದಲ್ಲದೇ ವಾಹನ ಜಪ್ತಿ ಮಾಡಿ ಪರವಾನಗಿ ಸಹ ರದ್ದುಪಡಿಸಲಾಗುದು ಎಂದರು.

ರೂ. 1.5 ಲಕ್ಷದವರೆಗೂ ನಗದು ರಹಿತ ಉಚಿತ ಅಪಘಾತ ಚಿಕಿತ್ಸೆ

2025ರ ಮೇ 25 ರಿಂದ ಅನ್ವಯವಾಗುವಂತೆ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿಯೊಬ್ಬ ನಾಗರೀಕನಿಗೂ 1.5 ಲಕ್ಷದವರೆಗೂ ಅಪಘಾತವಾದ ಪ್ರಕರಣಗಳಲ್ಲಿ ಕ್ಯಾಶ್‍ಲೆಸ್ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ

ನಗರದ ಪ್ರಮುಖ ಸ್ಥಳಗಳಲ್ಲಿ ಸಂಜೆಯಾದರೆ ಮದ್ಯ, ಮಾದಕ ವ್ಯಸನಿಗಳ ಹಾವಳಿ ಹೆಚ್ಚಾಗಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬರತ್ತಿದ್ದು, ಸೂಕ್ತಕ್ರಮ ಕೈಗೊಳ್ಳಲಾಗುವುದು. ನಗರದ ಆಜಾದ್ ನಗರದಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದೆ ಆದರೆ ಇಲ್ಲಿ ಸಂಜೆಯಾದರೆ ಕುಡುಕರ, ಮಾದಕ ವ್ಯಸನಿಗಳ ಅಡ್ಡೆಯಾಗಿ ಮಾರ್ಪಾಟಾಗಿರುವುದು ಗಮನಕ್ಕೆ ಬಂದಿದೆ. ಹಾಗೆಯೇ ಕೆಲವು ಔಷಧಿ ಅಂಗಡಿಗಳಲ್ಲಿ ಅನಧಿಕೃತ ವಿವಿಧ ರೀತಿಯ ಟ್ಯಾಬ್ಲೆಟ್, ಇನ್ನಿತರೆ ಔಷಧಿಗಳು ದೊರಕುವುದರಿಂದ ಯುವಕರು ಹೆಚ್ಚಾಗಿ ಮದ್ಯ, ಮಾದಕ ವಸ್ತುಗಳ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಸ್ಪಂದಿಸಿ ಇದಕ್ಕೆ ಶೀಘ್ರದಲ್ಲಿಯೇ ಪರಿಶೀಲನೆ ನಡೆಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಜಲಶ್ರೀ ಯೋಜನೆ 3 ತಿಂಗಳಲ್ಲಿ ಪೂರ್ಣ

ದಾವಣಗೆರೆ ನಗರದಲ್ಲಿ ಈಗಾಗಲೇ ಜಲಸಿರಿ ಯೋಜನೆ ಶೇ.80% ರಷ್ಟು ಪೂರ್ಣಗೊಂಡಿದೆ. ಇನ್ನೂ ಉಳಿದ ಕಾಮಗಾರಿ 2 ರಿಂದ 3 ತಿಂಗಳ ಒಳಗಾಗಿ ಪೂರ್ಣಗೊಳ್ಳುವುದರಿಂದ ಎಲ್ಲಾ ಬಡಾವಣೆಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದರು.

ಬಿತ್ತನೆ ಬೀಜ, ಗೊಬ್ಬರ ಕೊರತೆಯಿಲ್ಲ

ಈ ಭಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ, ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಆದ್ದರಿಂದ ರೈತರಿಗೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ದಾಸ್ತಾನು ಮಾಡಲಾಗಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ರೈತರು ಸಹ ಉತ್ತಮ ಗುಣಮಟ್ಟದ ಬೀಜಗಳನ್ನು ರೈತ ಸಂಪರ್ಕ ಕೇಂದ್ರ, ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕು. ಉತ್ಪನ್ನಗಳನ್ನು ಖರೀದಿಸಿದ ರಶೀದಿಗಳನ್ನು ಬೆಳೆ ಕಟಾವು ಮಾಡುವವರೆಗೂ ಜಾಗೃತವಾಗಿ ಇಟ್ಟುಕೊಂಡಿರಬೇಕು. ಬೀಜ ಗೊಬ್ಬರಗಳಲ್ಲಿ ಲೊಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಂಡು ಸೂಕ್ತ ಪರಿಹಾರ ಪಡೆಯಲು ಸಹಾಯಕವಾಗಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೂತನ ಜಿಲ್ಲಾ ಪಂಚಾಯತ್ ಸಿಇಓ ಮಾದವ ವಿಠಲ ರಾವ್, ಪೌರಾಯುಕ್ತೆ ರೇಣುಕಾ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹಾಂತೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರ ಕುಮಾರ್ ಮತ್ತಿತರರು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top