ದಾವಣಗೆರೆ: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ 25,000 ಸಸಿ ನೆಟ್ಟು ಪ್ರಕೃತಿ ಬೆಳೆಸಿದ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದ ಕೆ.ಎಂ. ವೀರಮ್ಮಗೆ ಕೇಂದ್ರ ಸರ್ಕಾರದ ಜಲ ಆಯೋಗದ ಜಲ ಯೋಧೆ (ವಾಟರ್ ವಾರಿಯರ್ಸ್) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕೃಷಿ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿರುವ ಕೆ.ಎಂ. ವೀರಮ್ಮ, ಜಲಯೋಧೆ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆಯಾಗಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಮಾರ್ಚ್ 4ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ವೀರಮ್ಮ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಅರಣ್ಯ ಇಲಾಖೆಯ ನೆರೇಗಾ ಯೋಜನೆ, ಸ್ವಯಂ ಸೇವಾ ಸಂಘಗಳು, ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದಾರೆ. ಗ್ರಾಮದ ಗಂಧದಮಟ್ಟಿ ಗುಡ್ಡ, ಕೆಂಗಣ್ಣನಾಯಕನ ಗುಡ್ಡ, ತಿಮ್ಮಪ್ಪನ ಗುಡ್ಡ ಮತ್ತು ಜಾನುವಾರು ಗುಡ್ಡಗಳಲ್ಲಿ ಗುಂಡಿ ತೆಗೆದು ಸೀತಾಫಲ, ಬಿದಿರು, ಹೊಂಗೆ, ಬೇವು, ಹುಣಿಸೆ, ಕಾಡು ಗೋಡಂಬಿ ಹಾಗೂ ವಿವಿಧ ಕಾಡು ಹಣ್ಣುಗಳ ಸಸಿಗಳನ್ನು 800 ಜನ ಕೂಲಿಕಾರರ ನೆರವಿನೊಂದಿಗೆ ನೆಟ್ಟು ಬೆಳೆಸಿದ್ದಾರೆ. ಅರಣ್ಯ ಇಲಾಖೆ 10 ಲಕ್ಷ ಮತ್ತು ನರೇಗಾ ಯೋಜನೆ ಅಡಿ 12 ಲಕ್ಷ ನೆರವಿನಿಂದ ಈ ಕಾರ್ಯವಾಗಿದೆ.



